ಬೆಂಗಳೂರು: ರೈತರ ಭೂಮಿಯನ್ನು ವಕ್ಫ್ ವಿವಾದಕ್ಕೆ ಸಿಲುಕಿಸಿ,ರಾಜ್ಯ ಕಾಂಗ್ರೆಸ್ ಸರ್ಕಾರ ಯಾರ ಹಿತ ಕಾಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಓಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ರಾಜ್ಯದಾದ್ಯಂತ ರೈತರ ಆರ್ ಟಿ ಸಿ ಗಳ ಕಾಲಂ 11ರಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದು, ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿ ಅಶೋಕ್ ಬೇಸರ ಪಟ್ಟಿದ್ದಾರೆ.
ಇದು ಕೇವಲ ದಾಖಲೆ ಬದಲಾವಣೆಯ ವಿಚಾರವಲ್ಲ. ಇದು ರೈತನ ಮಾಲೀಕತ್ವದ ಹಕ್ಕು, ಬದುಕು ಮತ್ತು ಭವಿಷ್ಯದ ಪ್ರಶ್ನೆ ಎಂದು ಹೆಳಿದ್ದಾರೆ.
ವರದಿಗಳ ಪ್ರಕಾರ 1,80,000ಕ್ಕೂ ಹೆಚ್ಚು ರೈತರ ಆರ್ ಟಿ ಸಿ ಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ.
ಒಟ್ಟು 3,00,000 ಆರ್ ಟಿ ಸಿ ಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎನ್ನಲಾಗಿದೆ.
31 ಜಿಲ್ಲೆಗಳ ರೈತರು ಇದರ ಪರಿಣಾಮಕ್ಕೆ ಒಳಗಾಗುವ ಆತಂಕದಲ್ಲಿದ್ದಾರೆ.
ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರೇ
ಈ ವರದಿಗಳು ತಪ್ಪಾಗಿದ್ದರೆ ಕೂಡಲೇ ರಾಜ್ಯದ ಜನರ ಮುಂದೆ ಸತ್ಯಾಂಶವನ್ನು ಇಡಿ. ಆದರೆ ವರದಿಗಳಲ್ಲಿ ಹೇಳಿರುವಂತೆ ರೈತರ ಆರ್ ಟಿ ಸಿ ಗಳಲ್ಲಿ ಈ ರೀತಿಯ ಉಲ್ಲೇಖಗಳು ಸೇರಿದ್ದರೆ, ನಿಮ್ಮ ಸರ್ಕಾರ ಉತ್ತರಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೂಡಲೇ ಈ ಸಂಪೂರ್ಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ. ರೈತರ ಆರ್ ಟಿ ಸಿ ಗಳಲ್ಲಿ ದಾಖಲಾಗಿರುವ ಎಲ್ಲ ವಿವಾದಾತ್ಮಕ ಉಲ್ಲೇಖಗಳನ್ನು ಮರುಪರಿಶೀಲಿಸಿ
ರಾಜ್ಯದ ಜನರ ಮುಂದೆ ಶ್ವೇತಪತ್ರ ಬಿಡುಗಡೆ ಮಾಡಿ ಎಂದು ಆಗ್ರಹಿಸಿರುವ ಅಶೋಕ್,
ರೈತನ ಭೂಮಿ ಉಳಿಯಬೇಕು,ರೈತನ ಹಕ್ಕು ಉಳಿಯಬೇಕು, ವಕ್ಫ್ ಹೆಸರಿನಲ್ಲಿ ರೈತರ ಜಮೀನು ನುಂಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

