ದಂತ‌‌ ಮುರಿದುಕೊಂಡ ಅಭಿಮನ್ಯು

ಮೈಸೂರು: ಮೈಸೂರು ದಸರಾದ ಅಂಬಾರಿ ಹೊರುವ ಆನೆ ಅಭಿಮನ್ಯು ದುಬಾರೆ ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವ ವೇಳೆ ಎಡ ದಂತದ ತುದಿ ಭಾಗವನ್ನು ಮುರಿದುಕೊಂಡಿದ್ದಾನೆ

ದುಬಾರೆ ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಅಭಿಮನ್ಯು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ದಂತವು ಮರದ ದಿಮ್ಮಿಗೆ ಅಥವಾ ಕಠಿಣ ವಸ್ತುವಿಗೆ ಬಡಿದು ಎಡಭಾಗದ ದಂತದ ತುದಿ ತುಂಡಾಗಿದೆ ಎಂದು ಅರಣ್ಯ ಇಲಾಖೆಯವರು ಹೇಳಿದ್ದಾರೆ.

ಘಟನೆ ನಡೆದ ತಕ್ಷಣ ಪಶುವೈದ್ಯರು ಸ್ಥಳಕ್ಕೆ ಆಗಮಿಸಿ ಆನೆಯನ್ನು ಪರಿಶೀಲಿಸಿ, ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಅಭಿಮನ್ಯು ಆರೋಗ್ಯವಾಗಿದ್ದಾನೆ. ಆಹಾರ ಸೇವನೆ ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ದಂತದ ಹೊರಭಾಗದ ಸಣ್ಣ ತುಂಡು ಮಾತ್ರ ಮುರಿದಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಭಿಮನ್ಯು ಕಳೆದ ಹಲವು ವರ್ಷಗಳಿಂದ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಪ್ರಮುಖ ಗಜಪಡೆಯ ನಾಯಕ. ಈ ವರ್ಷದ ದಸರಾ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಘಟನೆ ಗಮನ ಸೆಳೆದಿದ್ದರೂ, ದಂತಭಗ್ನದಿಂದ ದಸರಾ ಕರ್ತವ್ಯಕ್ಕೆ ಅಡ್ಡಿಯಾಗಲಿದೆಯೆ ಎಂಬುದನ್ನು ಕಾದುನೋಡಬೇಕಿದೆ.