ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿ ತಿಂಗಳು ಕಳೆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲು ಸಾಮರ್ಥ್ಯವಿಲ್ಲದ ರಬ್ಬರ್ ಸ್ಟಾಂಪ್ ಸಿಎಂ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದ್ದಾರೆ.
ರಾಜ್ಯಕ್ಕೆ ಒಬ್ಬ ಪೂರ್ಣಾವಧಿ ಶಿಕ್ಷಣ ಸಚಿವರನ್ನು ನೀಡಲಾಗದ ನಿಮ್ಮಂತಹ ರಬ್ಬರ್ ಸ್ಟಾಂಪ್ ಸಿಎಂ ಇದ್ದರೆಷ್ಟು, ಬಿಟ್ಟರೆಷ್ಟು, ಪ್ರತಿಯೊಂದಕ್ಕೂ ದೆಹಲಿ ಹೈಕಮಾಂಡ್ ಮುಂದೆ ಅರ್ಜಿ ಹಾಕಿಕೊಂಡು ಅವರ ಅಪಾಯಂಟ್ಮೆಂಟ್ ಗಾಗಿ ಕೈಕಟ್ಟಿ ಕುಳಿತುಕೊಳ್ಳುವ ನಿಮಗೆ ರಾಜ್ಯದ ಆಡಳಿತ ನಡೆಸುವ ಯಾವ ನೈತಿಕತೆ ಇದೆ ಸ್ವಾಮಿ ಎಂದು ಅಶೊಕ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ನಿಮ್ಮ ಈ ಹೈಕಮಾಂಡ್ ಗುಲಾಮಗಿರಿ ಮತ್ತು ನಿಷ್ಕ್ರಿಯತೆಗೆ ಬಡ ಮಕ್ಕಳ ಭವಿಷ್ಯ ಬಲಿಯಾಗುತ್ತಿದೆ. ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಬಡವರ, ಕೂಲಿ ಕಾರ್ಮಿಕರ ಮಕ್ಕಳಿಗೆ ಕನಿಷ್ಠ ಒಂದು ಜೊತೆ ಶೂ, ಸಾಕ್ಸ್ ಕೊಡಲು ಸಾಧ್ಯವಾಗಿಲ್ಲ ನಿಮ್ಮ ನಾಲಾಯಕ್ ಸರ್ಕಾರಕ್ಕೆ ಎಂದು ಜರಿದಿದ್ದಾರೆ.
ಭ್ರಷ್ಟಾಚಾರ, ಕಮಿಷನ್ ಲೂಟಿಯಲ್ಲೇ ಮುಳುಗಿರುವ ನಿಮ್ಮ ಈ ಸರ್ಕಾರಕ್ಕೆ ಬಡ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ವಿಕೇಂದ್ರೀಕರಣ ಬಿಟ್ಟು, ಕಮಿಷನ್‌ಗಾಗಿ ಎಲ್ಲವನ್ನೂ ಕೇಂದ್ರ ಕಚೇರಿ ಟೆಂಡರ್ ಎಂದು ನಿಮ್ಮ ಸುಪರ್ದಿಗೆ ಪಡೆದು ಇಡೀ ವ್ಯವಸ್ಥೆಯನ್ನೇ ಹಳ್ಳ ಹಿಡಿಸಿದ್ದೀರಿ. ಜುಲೈ ಬಂದರೂ ಚಿಂತಾಮಣಿಯೊಂದರಲ್ಲೇ 10,660ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಹೋಗುತ್ತಿರುವುದು ನಿಮ್ಮ ದುರಾಡಳಿತಕ್ಕೆ ಹಿಡಿದ ಕನ್ನಡಿ ಎಂದು ಉದಾಹರಣೆ ಸಹಿತ ಚಾಟಿ ಬೀಸಿದ್ದಾರೆ.
ಬಡ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ನಿಮಗೆ ಹೆತ್ತವರ ಕಣ್ಣೀರಿನ ಶಾಪ ತಟ್ಟದೇ ಬಿಡದು. ತಕ್ಷಣವೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಲು ಕ್ರಮ ಕೈಗೊಳ್ಳಿ. ಕೂಡಲೇ ರಾಜ್ಯಕ್ಕೆ ಒಬ್ಬ ಪೂರ್ಣಾವಧಿ ಶಿಕ್ಷಣ ಸಚಿವರನ್ನು ನೇಮಿಸಿ ಎಂದು ಅಶೋಕ್ ಒತ್ತಾಯಿಸಿದ್ದಾರೆ.

