ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಕ್ಕಿದೆ,ಅಂತಹ ಅದ್ಭುತ ಜಯ ತಂದುಕೊಟ್ಟ ಜನತೆಗೆ ಕೃತಜ್ಞತೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ
ಪಂಚರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಎಕ್ಸ್ ಖಾತೆಯಲ್ಲಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಜನಶಕ್ತಿ ಮೇಲುಗೈ ಸಾಧಿಸಿದೆ,ಪಶ್ಚಿಮ ಬಂಗಾಳದ ಪ್ರತಿಯೊಬ್ಬ ವ್ಯಕ್ತಿಗೂ ನಾನು ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಬರೆದಿದ್ದಾರೆ.
ಜನರು ಬಿಜೆಪಿಗೆ ಅದ್ಭುತ ಜನಾದೇಶವನ್ನು ನೀಡಿದ್ದಾರೆ ಮತ್ತು ನಮ್ಮ ಪಕ್ಷವು ಪಶ್ಚಿಮ ಬಂಗಾಳದ ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಭರವಸೆ ನೀಡುತ್ತೇನೆ. ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ಮತ್ತು ಘನತೆಯನ್ನು ಖಾತ್ರಿಪಡಿಸುವ ಸರ್ಕಾರವನ್ನು ನಾವು ಒದಗಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ಅಸ್ಸಾಂನ ಜನರ ನಡುವೆ ದಿನದ 24 ಗಂಟೆಯೂ ಶ್ರಮಿಸುತ್ತಿರುವ ಎಲ್ಲಾ ಬಿಜೆಪಿ-ಎನ್‌ಡಿಎ ಕಾರ್ಯಕರ್ತರನ್ನು ಶ್ಲಾಘಿಸುತ್ತೇನೆ. ಕಳೆದ ದಶಕದಲ್ಲಿ ನಮ್ಮ ಪಕ್ಷ ಮತ್ತು ಮೈತ್ರಿಕೂಟ ಬೆಳೆದಿರುವುದು ಶ್ಲಾಘನೀಯ. ಅವರ ಪ್ರಯತ್ನಗಳು ನಮ್ಮ ಸಕಾರಾತ್ಮಕ ಕಾರ್ಯಸೂಚಿಯನ್ನು ಜನರ ಹೃದಯಕ್ಕೆ ತಲುಪಿಸಿವೆ ಎಂದು ಮೋದಿ ತಿಳಿಸಿದ್ದಾರೆ.
ನಮ್ಮ ಉತ್ತಮ ಆಡಳಿತದ ದಾಖಲೆ ಮತ್ತು ಎನ್.ರಂಗಸಾಮಿ ನೇತೃತ್ವದ ಸರ್ಕಾರದ ಕೆಲಸದ ಆಧಾರದ ಮೇಲೆ, ಪುದುಚೇರಿಯ ಜನರು ಎನ್‌ಡಿಎಗೆ ಮತ್ತೊಂದು ಅವಧಿಗೆ ಆಶೀರ್ವದಿಸಿದ್ದಾರೆ. ಈ ಆಶೀರ್ವಾದಗಳು ಉತ್ತಮ ಆಡಳಿತವನ್ನು ನೀಡಲು ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ವೇಗವನ್ನು ನೀಡುತ್ತವೆ ಎಂದು ಮೋದಿ ತಿಳಿಸಿದ್ದಾರೆ.
ನಮ್ಮ ಪುದುಚೇರಿಯ ಎನ್‌ಡಿಎ ಕಾರ್ಯಕರ್ತರ ಅಸಾಧಾರಣ ಪ್ರಯತ್ನಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನಿರಂತರವಾಗಿ ಜನರ ನಡುವೆಯೇ ಇದ್ದಾರೆ. ನಮ್ಮ ದೃಷ್ಟಿಕೋನ ಮತ್ತು ಸಾಧನೆಯ ದಾಖಲೆಯನ್ನು ವಿವರಿಸಿದ್ದಾರೆ. ಇದು ಜನರು ನಮ್ಮನ್ನು ಮತ್ತೊಮ್ಮೆ ಆಶೀರ್ವದಿಸುವುದನ್ನು ಖಚಿತಪಡಿಸಿದೆ ಎಂದಿದ್ದಾರೆ.
ಕೇರಳದಲ್ಲಿ ಬಿಜೆಪಿ-ಎನ್‌ಡಿಎಗೆ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕೇರಳದ ಪ್ರಗತಿಗೆ ನಾವು ಸದಾ ದನಿಯಾಗಿರುತ್ತೇವೆ. ವಿಕಸಿತ ಕೇರಳದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಶ್ರಮಿಸುತ್ತೇವೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಜಯಗಳಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಗೆ ಬೆಂಬಲ ನೀಡಿದ ತಮಿಳುನಾಡಿನ ಮತದಾರರಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.
ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅವರ ಜೀವನವನ್ನು ಸುಧಾರಿಸುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ.ಟಿವಿಕೆ ಅವರ ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದನೆಗಳು ಎಂದು ಮೋದಿ ಬತೆದಿದ್ದಾರೆ.

