ಮಮತಾರನ್ನ ಸೋಲಿಸಿದ್ದಕ್ಕೆ ನನ್ನ ಪಿಎ ಹತ್ಯೆ: ಸುವೇಂದು ಅಧಿಕಾರಿ ಬೇಸರ

ಕೋಲ್ಕತ್ತಾ: ಮಮತಾ ಬ್ಯಾನರ್ಜಿಯವರನ್ನು ಭವಾನಿಪುರದಲ್ಲಿ ಸೋಲಿಸಿದ್ದಕ್ಕೆ ನನ್ನ ಪಿಎ ಚಂದ್ರನಾಥ್ ರಥ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಗಂಭಿರ ಆರೋಪ ಮಾಡಿದ್ದಾರೆ.

ರಥ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತರುವಾಗ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ವೇಳೆ ಕೊಲೆ ನಡೆದ ರೀತಿಯನ್ನು ನಾವು ಎಷ್ಟು ಖಂಡಿಸಿದರೂ ಸಾಲದು. ನನ್ನ ಸಹಾಯಕರಾಗಿದ್ದಕ್ಕೆ ರಥ್ ಅವರನ್ನು ಕೊಲ್ಲಲಾಗಿದೆ. ಈ ಕೊಲೆ ಪೂರ್ವಯೋಜಿತ ಎಂದು ದೂರಿದರು.

ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಕುಟುಂಬದ ಬೇಡಿಕೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೇಲೆ 4 ಗುಂಡುಗಳು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ನಾನು ಅವರ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಸುವೇಂದು ಅಧಿಕಾರಿ ಭರವಸೆ ನೀಡಿದರು.

ಕೆಲವು ದಿನಗಳಿಂದ ಗಮನಿಸಿ ಸಂಚು ರೂಪಿಸಿ ಈ ದಾಳಿ ನಡೆಸಲಾಗಿದೆ. ರಥ್ ಅವರ ಮೇಲೆ ಗುಂಡು ಹಾರಿಸುವ ಮೊದಲು ಕಾರನ್ನು ಹಿಂಬಾಲಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹತ್ತಿರದಿಂದ ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಸಾವನ್ನು ಖಚಿತಪಡಿಸಿಕೊಳ್ಳಲು ಇಷ್ಟು ಹತ್ತಿರದಿಂದ ದಾಳಿ ನಡೆಸಲಾಗಿದೆ ಎಂದು ಅವರು ದುಃಖ ಹಾಗೂ ಆಕ್ರೋಶದಿಂದ ಹೇಳಿದರು.