ವಿಜಯ್ ಅವರನ್ನು ದೇವರೇ ಕಾಪಾಡಬೇಕು-ಹೆಚ್ ಡಿ ಕೆ

ಹಾಸನ: ಒಂದರೆಡು ದಿನಗಳಲ್ಲಿ ತಮಿಳುನಾಡು ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಬಗೆಹರಿಯಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ದಶಕಗಳಿಂದ ರಾಜಕೀಯ ಎದುರಾಳಿಗಳಾಗಿ ಹೋರಾಟ ನಡೆಸಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚಿಸುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.

ಹಾಸನ ಜಿಲ್ಲೆಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಬೆಳಗ್ಗೆ ದೇವರ ದರ್ಶನ ಪಡೆದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಯನ್ನು ಹೊರತುಪಡಿಸಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಅಧಿಕಾರಕ್ಕಾಗಿ ಕೈಜೋಡಿಸುವ ಸಾಧ್ಯತೆ ಗೋಚರಿಸುತ್ತಿಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ಸದ್ಯಕ್ಕೆ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಪಾಲರು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲಿನ ಕಾನೂನು ಪಂಡಿತರ ಸಲಹೆಗಳನ್ನು ತೆಗೆದುಕೊಂಡು ಸರ್ಕಾರ ರಚನೆಯ ಬಗ್ಗೆ ಕ್ರಮಗಳನ್ನು ವಹಿಸುತ್ತಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೆಚ್ ಡಿ ಕೆ ತಿಳಿಸಿದರು.

ನಿಮಗೆ ಬೆಂಬಲವಿರುವ ಶಾಸಕರ ಸಹಿ ಇರುವ ಪುಟ್ಟಿಯೊಂದಿಗೆ ಬನ್ನಿ ಎಂದು ರಾಜ್ಯಪಾಲರು ವಿಜಯ್ ಅವರಿಗೆ ಸೂಚಿಸಿದ್ದಾರೆ. ಆ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಪಾಲರು ಹೆಜ್ಜೆ ಇಡುತ್ತಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಶ್ನೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮಿಳುನಾಡು ರಾಜ್ಯದ ಬಜೆಟ್ ಗಾತ್ರ 3.5 ಲಕ್ಷ ಕೋಟಿ ರೂಪಾಯಿ. ಆದರೆ ಇವರು ಭರವಸೆಗಳನ್ನು ನೀಡಿರುವ ಫ್ರೀ ಬೀಸ್ ಗಳಿಗೆ ಕಡಿಮೆ ಎಂದರೂ 6 ಲಕ್ಷ ಕೋಟಿ ರೂಪಾಯಿ ಬೇಕು. ಅಷ್ಟು ಹಣವನ್ನು ಎಲ್ಲಿಂದ ತರುತ್ತಾರೆ,ವಿಜಯ್ ಅವರನ್ನು ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.