ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ವೇಳೆ ರಾಜ್ಯ ರಾಜಧಾನಿಯಲ್ಲಿ ಭಾರೀ ಭದ್ರತಾ ಲೋಪದ ಶಂಕೆ ವ್ಯಕ್ತವಾಗಿದೆ.
ಮೋದಿ ಅವರ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಗಂಟೆಗೆ ಮೊದಲು, ಕಗ್ಗಲೀಪುರದ ತಾತಗುಣಿ ಬಳಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದ ಹೊರಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.ವಿಷಯ ಹರಡುತ್ತಿದ್ದಂತೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ನೈಸ್ ರಸ್ತೆ ಜಂಕ್ಷನ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, 20-25 ಅಡಿ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್‌ಸ್ಟೆಬಲ್ ಗಮನಿಸಿದ್ದಾರೆ.
ತಕ್ಷಣ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಇರುವುದು ಕಂಡುಬಂದಿದೆ.
ಪೊಲೀಸರು ತಕ್ಷಣ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿ ಯಾವುದೇ ಅನಾಹುತವಾಗದಂತೆ ಕ್ರಮ ಕೈಗೊಂಡರು.
ಈ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ವಲಯದ ಡಿಐಜಿ ಗಿರೀಶ್ ಅವರು ಈ ಕುರಿತು ಮಾತನಾಡಿ, ಜಿಲೆಟಿನ್ ಕಡ್ಡಿಗಳು ಅಲ್ಲಿಗೆ ಹೇಗೆ ಬಂದವು, ಇಟ್ಟವರು ಯಾರು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರ ಹಾಗೂ ರಾಮನಗರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಕೋರಮಂಗಲದ ಮನೆಯೊಂದರಲ್ಲಿ ಅಡಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವುಚಾರಣೆ ನಡೆಸಲಾಗುತ್ತಿದೆ.

