ನಟ ದರ್ಶನ್ ಗೆ ಬಿಗ್ ಶಾಕ್ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ
ಸರ್ವೋಚ್ಛ ನ್ಯಾಯಾಲಯ ಬಿಗ್ ಶಾಕ್ ನೀಡಿದೆ.

ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ದರ್ಶನ್ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

ವಿಚಾರಣಾ ನ್ಯಾಯಾಲಯವು ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದ್ದು, ತಕ್ಷಣದಿಂದಲೇ ವಿಚಾರಣೆಯನ್ನು ಆದ್ಯತೆಯ ಮೇರೆಗೆ ನಡೆಸಿ ಇತ್ಯರ್ಥ ಪಡಿಸಬೇಕೆಂದು ಆದೇಶಿಸಿದೆ.

ಜೈಲಿನಲ್ಲಿ ಇತರ ಕೈದಿಗಳಿಗೆ ನೀಡುವಂತೆಯೇ ದರ್ಶನ್ ಅವರಿಗೆ ಸಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸುಪ್ರೀಂ ಸೂಚಿಸಿದೆ.

ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಕುರಿತು ರಾಜ್ಯ ಸರ್ಕಾರದ ವರದಿ ಕೇಳಿರುವ ಸುಪ್ರೀಂ ಕೋರ್ಟ್,ಒಂದು ವರ್ಷದವರೆಗೆ ಅರ್ಜಿ ಸಲ್ಲಿಸುವಂತಿಲ್ಲ,ಮುಂದಿನ ಒಂದು ವರ್ಷದವರೆಗೆ ದರ್ಶನ್ ಯಾವುದೇ ಜಾಮೀನು ಅರ್ಜಿ ಸಲ್ಲಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಒಂದು ವೇಳೆ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಆ ಬಳಿಕ ಅವರಿಗೆ ಜಾಮೀನು ಪರಿಗಣಿಸಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಹಿಂದಿನ ವಿಚಾರಣೆಗಳಲ್ಲಿ, ಜೈಲಿನಲ್ಲಿ ಸರಿಯಾಗಿ ಊಟ ಸಿಗುವುದಿಲ್ಲ,ನನ್ನ ಕುಟುಂಬದ ವರನ್ನು ನೋಡಲು ಅವಕಾಶ ಕೊಡುತ್ತಿಲ್ಲ, ಸಹ ಕೈದಿಗಳಿಂದ ಕಿರುಕುಳ ಮತ್ತು ಬೆದರಿಕೆ ಎದುರಿಸುತ್ತಿರುವುದಾಗಿ ದರ್ಶನ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಇದಾದ ಬಳಿಕ ನ್ಯಾಯಾಲಯ ಜೈಲು ಅಧಿಕಾರಿಗಳಿಂದ ವರದಿ ಕೇಳಿತ್ತು.

ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂ ಕೋರ್ಟ್‌ಗೆ ದರ್ಶನ್ ಮಾಡಿದ್ದ ಎಲ್ಲ ಆರೋಪಗಳನ್ನು ವಿಡಿಯೋ ಸಾಕ್ಷ್ಯಿಗಳ ಸಹಿತ ನೀಡಿ ತಳ್ಳಿಹಾಕಿದ್ದರು.

ವಿಚಾರಣೆ ವೇಳೆ, ಪ್ರಕರಣದಲ್ಲಿರುವ 270 ಸಾಕ್ಷಿದಾರರಲ್ಲಿ ಇದುವರೆಗೆ ಕೇವಲ 10 ಮಂದಿಯಷ್ಟೇ ವಿಚಾರಣೆಗೆ ಒಳಪಟ್ಟಿದ್ದಾರೆ ಎಂಬುದೂ ಗಮನಕ್ಕೆ ಬಂತು. ವಿಚಾರಣೆಯಲ್ಲಿ ವಿಳಂಬವಾಗುತ್ತಿರುವ ಕಾರಣ, ಉಳಿದ ಸಾಕ್ಷಿದಾರರ ವಿಚಾರಣೆ ಮುಗಿಯುವವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ದರ್ಶನ್ ಮನವಿ ಮಾಡಿದ್ದರು.

ಈ ವಿಷಯದ ಕುರಿತು ವಿವರವಾದ ವರದಿ ಕೇಳಿದ್ದ ಸುಪ್ರೀಂ ಕೋರ್ಟ್ ಇಂದು ಅಂತಿಮ ಆದೇಶ ಹೊರಡಿಸಿದೆ.ಹಾಗಾಗಿ ದರ್ಶನ್ ಅವರುಗೆ ಇನ್ನೂ ಒಂದು ವರ್ಷದ ವರೆಗೆ ಜೈಲೇ ಗತಿ.