ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ 21 ವರ್ಷದ ಯುವತಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ‘ಅಕ್ಕಪಡೆ’ ತಂಡ ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದೆ.
ಯುವತಿ ರೋಜ್ ಮೇರಿ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಅನುಚಿತವಾಗಿ ವರ್ತಿಸಿ ಅಲ್ಲಿದ್ದವರಿಗೆ ತೊಂದರೆ ಉಂಟುಮಾಡಿದ್ದಳು. ಇದರಿಂದ ಆತಂಕಗೊಂಡ ಸ್ಥಳೀಯರು ತಕ್ಷಣ ‘ಅಕ್ಕಪಡೆ’ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಕ್ಕಪಡೆ ಸದಸ್ಯರು ಯುವತಿಯನ್ನು ವಿಚಾರಿಸಿ, ಆಕೆಯ ವಿಳಾಸ ಪಡೆದುಕೊಂಡು ಬುದ್ದಿ ಹೇಳಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ತಕ್ಷಣ ಸ್ಪಂದಿಸಿದ್ದೇವೆ. ಯುವತಿಯ ಸುರಕ್ಷತೆ ನಮ್ಮ ಆದ್ಯತೆ. ಕುಟುಂಬಸ್ಥರಿಗೆ ತಿಳಿಸಿ, ಅಗತ್ಯ ಕೌನ್ಸೆಲಿಂಗ್ ಮಾಡಿ ಮನೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಅಕ್ಕಪಡೆ ಸದಸ್ಯರು ಹೇಳಿದ್ದಾರೆ.
ಸರಸ್ವತಿಪುರಂ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

