ಮೈಸೂರು: ಮೈಸೂರಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಅವಧೂತ ದತ್ತ ಪೀಠದ ಗಿಳಿಗಳ ಪುನರ್ವಸತಿ ಕೇಂದ್ರ ‘ಶುಕವನ’ವು ಜೂನ್ 1 ರಿಂದ (ನಾಳೆಯಿಂದ) ಮುಂದಿನ ಸೂಚನೆಯವರೆಗೆ ತಾತ್ಕಾಲಿಕವಾಗಿ ಬಂದ್ ಆಗಲಿದೆ.
ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಶುಕವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಸದ್ಯಕ್ಕೆ ನಿರ್ಬಂಧಿಸಲಾಗುತ್ತಿದೆ ಎಂದು ದತ್ತ ಪೀಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕವನ ಮುಚ್ಚಲ್ಪಟ್ಟರೂ, ಅದಕ್ಕೆ ಹೊಂದಿಕೊಂಡಂತಿರುವ ವಿಶ್ವವಿಖ್ಯಾತ ಬೋನ್ಸಾಯ್ ಉದ್ಯಾನವನ ಮತ್ತು ವಿಶ್ವಂ ವಸ್ತು ಸಂಗ್ರಹಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಪ್ರವಾಸಿಗರು ಮತ್ತು ಸಾರ್ವಜನಿಕರು ಎಂದಿನಂತೆ ಈ ಎರಡು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ ಎಂದು
ಆಡಳಿತ ಮಂಡಳಿ ಮನವಿ ಮಾಡಿದೆ.
ಅಭಿವೃದ್ಧಿ ಕೆಲಸಗಳಿಗಾಗಿ ಶುಕವನವನ್ನು ಮಾತ್ರ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಇದರಿಂದ ವೀಕ್ಷಕರಿಗೆ ಉಂಟಾಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ. ಸಾರ್ವಜನಿಕರು ಮತ್ತು ಭಕ್ತಾದಿಗಳು ಎಂದಿನಂತೆ ತಮ್ಮ ಸಹಕಾರವನ್ನು ಮುಂದುವರಿಸಬೇಕು ಎಂದು ವಿನಂತಿಸಲಾಗಿದೆ.

