ಮಂಡ್ಯ: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿ ರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದರೂ ನೆರೆಯ ತಮಿಳುನಾಡು ಕಾವೇರಿ ವಿಚಾರದಲ್ಲಿ ಖ್ಯಾತೆ ತೆಗೆದಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿ ಸಿದರು.
ಮಂಡ್ಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕೆ, ತಮಿಳುನಾಡು ಕ್ಯಾತೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಕಳೆದ 50 ವರ್ಷದಿಂದಲೂ ಕಾವೇರಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ತಮಿಳುನಾಡು ರಾಜ್ಯಕ್ಕೆ ನಿಗದಿಗಿಂತ ಎರಡು ಪಟ್ಟು ನೀರು ಕೊಟ್ಟಿದ್ದೂ ಇದೆ. ಅವರು ಅದನ್ನು ನೆನಪು ಮಾಡಿಕೊಳ್ಳುವುದಿಲ್ಲ. ಜಲಾಶಯಗಳು ತುಂಬಿದಾಗ ಯಥೇಚ್ಛವಾಗಿ ಆ ರಾಜ್ಯಕ್ಕೆ ನೀರು ಹರಿದು ಹೋಗಿದೆ. ಮಳೆ ಆಗದೆ ಜಲಾಶಯಗಳು ಖಾಲಿ ಬಿದ್ದಾಗ ಆ ರಾಜ್ಯವು ನಮ್ಮ ಮೇಲೆ ನೀರಿಗಾಗಿ ಒತ್ತಡ ಹೇರುವುದು ಸೂಕ್ತವಲ್ಲ ಎಂದು ತಿಳಿಸಿದರು.
ವಾಸ್ತವ ಪರಿಸ್ಥಿತಿಯನ್ನು ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ನೆರೆಹೊರೆ ರಾಜ್ಯಗಳಲ್ಲಿ ವಾಸ ಮಾಡುವ ನಾವು ನಾವು ಅಣ್ಣ ತಮ್ಮಂದಿರ ರೀತಿ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ತಿಕ್ಕಾಟ ನಡೆಸುವುದು ಸರಿಯಲ್ಲ. ಇರುವ ಪರಿಸ್ಥಿತಿಯನ್ನು ಅರಿತು ಪರಸ್ಪರ ಹಂಚಿಕೊಂಡು ನಡೆದರೆ ಎರಡು ರಾಜ್ಯಗಳಿಗೂ ಉತ್ತಮ ಎಂಬುದನ್ನು ತಮಿಳುನಾಡು ತಿಳಿದುಕೊಳ್ಳಬೇಕು ಹೇಳಿದರು.
ಕರ್ನಾಟಕಕ್ಕೆ ಎಲ್ಲಾ ಕಡೆಗಳಿಂದಲೂ ನಿರಂತರವಾಗಿ ಅನ್ಯಾಯ ಆಗುತ್ತದೆ. ನಮ್ಮ ರಾಜ್ಯದ ಜನರ ಹಣದಲ್ಲಿ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ಎಲ್ಲಾ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಹಣದಲ್ಲಿ ಕಷ್ಟಪಟ್ಟು ಅಣೆಕಟ್ಟೆ ಕಟ್ಟಿಕೊಂಡರೆ ಅವುಗಳನ್ನು ಪಕ್ಕದ ರಾಜ್ಯಗಳಿಗೆ ನೀರು ಬೀಳುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದೇವೆ. ಅಂತಹ ಪರಿಸ್ಥಿತಿ ಸೃಷ್ಟಿಯಾಗಲು ರಾಜ್ಯದ ವೈಫಲ್ಯವು ಇದೆ ಎಂದು ಹೆಚ್ ಡಿ ಕೆ ಬೇಸರ ವ್ಯಕ್ತಪಡಿಸಿದರು.
ದೇವೇಗೌಡರು ಈ ದೇಶದ ಪ್ರಧಾನಿ ಆಗುವವರೆಗೂ ನೀರಾವರಿ ವಿಷಯದಲ್ಲಿ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸಗಳು ಆಗಿರಲಿಲ್ಲ. ಈ ರಾಜ್ಯದ ವಿಧಾನಸಭೆಯ ಸದಸ್ಯರಾಗಿದ್ದಾಗಲೇ ಅವರು ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡಿ ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಕಾರಣಿಭೂತರಾದರು. ಕೆಲವರು ಇದೇ ವಿಷಯವನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ನಮ್ಮ ಡ್ಯಾಂಗಳು ಪಕ್ಕದ ತಮಿಳುನಾಡಿಗೆ ನೀರು ಬಿಡುವ ಡ್ಯಾಂಗಳಾಗಿ ಬದಲಾಗಿವೆ ಎಂದು ಅವರು ಕಿಡಿಕಾರಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುವ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ. ಅತಿ ಮುಖ್ಯವಾಗಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಈ ಅಣೆಕಟ್ಟೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈಗಾಗಲೇ ರಾಜ್ಯವು ಕೇಂದ್ರ ಸರ್ಕಾರಕ್ಕೆ ಯೋಜನಾ ಸಮಗ್ರ ವರದಿ ಸಲ್ಲಿಸಿದೆ. ತಮಿಳುನಾಡು ರಾಜ್ಯದ ಸಹಮತ ಅಗತ್ಯವಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮೇಕೆದಾಟು ಅನುಷ್ಠಾನಕ್ಕೆ ಬಂದರೆ ಎರಡು ರಾಜ್ಯಗಳಿಗೆ ಲಾಭವಾಗಲಿದೆ,
ಕುಡಿಯುವ ನೀರಿಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ. ಅಷ್ಟೇ ಏಕೆ ಡಿಪಿಆರ್ ನಲ್ಲಿಯು ನಮೂದಿಸಿದ್ದೇವೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ನೆರೆರಾಜ್ಯ ತಕರಾರು ಮಾಡುತ್ತಿರುವುದು ಸರಿಯಲ್ಲ. ತಮಿಳುನಾಡಿನ ರಾಜಕೀಯ ಪಕ್ಷಗಳು ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಹೆಚ್ ಡಿ ಕೆ ಆಗ್ರಹಿಸಿದರು.

