ಚಾ.ನಗರ ಜಿಲ್ಲಾಡಳಿತದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 31 ದೂರುಗಳು ದಾಖಲು

ಚಾಮರಾಜನಗರ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟಾರೆ 31 ದೂರುಗಳು ದಾಖಲಾದವು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ಒಂದು ತಾಸಿನ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಭಾಗದಿಂದ ಸಾರ್ವಜನಿಕರು ಸತತವಾಗಿ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.

ಕೊಳ್ಳೇಗಾಲ ಭಾಗದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ, ಚಾಮರಾಜನಗರ ಪಟ್ಟಣದ 15ನೇ ವಾರ್ಡಿನಲ್ಲಿ ನಗರೋತ್ಥಾನದಡಿ ಇನ್ನೂ ರಸ್ತೆ ನಿರ್ಮಾಣವಾಗದಿರುವುದು, ಕರಿನಂಜನಪುರದಲ್ಲಿ ಸ್ಮಶಾನಕ್ಕೆ ಅಳವಡಿಸಲಾದ ಗೇಟ್ ಕಳಪೆಯಿಂದ ಕೂಡಿರುವುದು, ಯಳಂದೂರು ತಾಲೂಕಿನ ಕೆಸ್ತೂರಿನಲ್ಲಿ ಮಳೆಗಾಲದಲ್ಲಿ ಚರಂಡಿ ನೀರು ತುಂಬಿ ಮಾರಮ್ಮನ ದೇವಾಲಯದ ಬಳಿ ನಿಲ್ಲುವುದು, ನಗರದ ಗುಂಡ್ಲುಪೇಟೆ ರಸ್ತೆಯು ಕಿತ್ತು ಹೋಗಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದವು.

ಹನೂರು ತಾಲೂಕಿನ ಸಪ್ಪಯ್ಯನಪುರದಲ್ಲಿ ಸ್ಮಶಾನ ಜಾಗಕ್ಕಾಗಿ ಸಲ್ಲಿಸಲಾದ ಅರ್ಜಿ ಇತ್ಯರ್ಥವಾಗದಿರುವುದು, ಅರಕಲವಾಡಿ, ಯಣಗುಂಬ, ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಬಸ್ ಗಳ ವ್ಯವಸ್ಥೆ, ನಿಲುಗಡೆ, ನಗರದ ಸತ್ಯಮಂಗಲ ರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು, 19ನೇ ವಾರ್ಡಿನಲ್ಲಿ ಒಳಚರಂಡಿ ನಿರ್ಮಾಣವಾಗದಿರುವುದು, ಹನೂರು ಭಾಗದ ಬಂಡಳ್ಳಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಕ ಮಾಡುವ ಬಗ್ಗೆ ಸ್ಥಳೀಯರಿಂದ ಅಹವಾಲುಗಳು ದೂರವಾಣಿ ಮೂಲಕ ಸಲ್ಲಿಕೆಯಾದವು.

ಉದ್ಯೋಗ ಖಾತರಿ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಲ್ಲಿಕೆಯಾಗಿರುವ ದೂರುಗಳು ಇತ್ಯರ್ಥವಾಗಿಲ್ಲ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲ ಎಂಬ ದೂರುಗಳು ಸಹ ಕಾರ್ಯಕ್ರಮದಲ್ಲಿ ಕೇಳಿ ಬಂದವು. ಮಾಂಬಳ್ಳಿ ಸರ್ಕಾರಿ ರೇಷ್ಮೆ ಫಿಲೇಚರ್ ಪುನಶ್ಚೇತನಕ್ಕೆ ಕ್ರಮವಹಿಸುವಂತೆ ಸ್ಥಳೀಯರಿಂದ ಮನವಿ ಬಂದಿತು.

ಖಾತೆ ಮಾಡಿಕೊಡದಿರುವ ಬಗ್ಗೆ ಹಲವು ವೈಯಕ್ತಿಕ ದೂರುಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇನ್ನಿತರ ಹಲವು ಸಮಸ್ಯೆಗಳು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದವು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರು ದೂರವಾಣಿ ಮೂಲಕ ಜನತೆಯಿಂದ ಕೇಳಿಬಂದ ಪ್ರತಿ ಸಮಸ್ಯೆ, ದೂರುಗಳನ್ನು ಆಲಿಸಿ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಹರಿಸುವಂತೆ ಸೂಚಿಸಿದರು.

ಕರೆ ಮಾಡಿದ ಸಾರ್ವಜನಿಕರ ದೂರವಾಣಿ ಸಂಖ್ಯೆಗಳನ್ನು ಸಹ ಪಡೆದುಕೊಂಡ ಜಿಲ್ಲಾಧಿಕಾರಿಯವರು ನಿಮ್ಮ ಕುಂದು ಕೊರತೆಗಳಿಗೆ ಅಧಿಕಾರಿಗಳು ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಅವರು ಸಹ ತಮ್ಮ ಇಲಾಖಾ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರಿಂದ ಆಲಿಸಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ನೇರ ಫೋನ್ ಇನ್ ಕಾರ್ಯಕ್ರಮದ ಬಳಿಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು, ಸಾರ್ವಜನಿಕರಿಂದ ಸ್ವೀಕರಿಸಲಾದ ಕರೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆ ಇರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವಿವರವಾಗಿ ಪರಿಶೀಲಿಸಿ ಪರಿಹಾರಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರೆ ಮಾಡಿರುವವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಅವರ ಮನೆ ಬಾಗಿಲಿಗೆ ತೆರಳಿ ಅವರ ಕುಂದು ಕೊರತೆಗಳನ್ನು ಆಲಿಸಿ ಎಲ್ಲ ಇತ್ಯರ್ಥಗೊಳಿಸಬೇಕು ಎಂದು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.