ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಪೂರ್ಣ ಸಜ್ಜಾಗಿದೆ.
ಪ್ರಧಾನಿಯವರ ಭೇಟಿಯನ್ನು ಅಚ್ಚುಕಟ್ಟಾಗಿ ಮತ್ತು ಸುಗಮವಾಗಿ ನಿರ್ವಹಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಇತರ ಇಲಾಖೆಗಳು ಕಳೆದ ಹಲವು ದಿನಗಳಿಂದ ಸಕಲ ಸಿದ್ಧತೆಗಳನ್ನು ಮಾಡಿವೆ.
ಪ್ರಧಾನಿಯವರ ಆಗಮನಕ್ಕಾಗಿ ಓವಲ್ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿದೆ, ಹೆಲಿಪ್ಯಾಡ್‌ನಲ್ಲಿ ಟ್ರಯಲ್ ಲ್ಯಾಂಡಿಂಗ್ ನಡೆಸಿ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. ಹೆಲಿಪ್ಯಾಡ್ ಸುತ್ತಮುತ್ತ ಬಹುಪದರದ ಭದ್ರತೆ ಏರ್ಪಡಿಸಲಾಗಿದ್ದು, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ದಗೊಳಿಸಲಾಗಿದೆ.
ಪ್ರಧಾನಿಯವರ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ. ನಗರದ ಪ್ರಮುಖ ರಸ್ತೆಗಳು, ಹೆಲಿಪ್ಯಾಡ್, ಕಾರ್ಯಕ್ರಮದ ಸ್ಥಳ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದ ಉದ್ದಕ್ಕೂ ಬಹುಪದರದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿ, ಕೇಂದ್ರ ಮೀಸಲು ಪಡೆ, ಶ್ವಾನದಳ ಮತ್ತು ಬಾಂಬ್ ನಾಶಕ ದಳವನ್ನು ನಿಯೋಜಿಸಲಾಗಿದೆ. ಪ್ರತಿ ಜಂಕ್ಷನ್‌ನಲ್ಲೂ ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ಭದ್ರತೆಯ ಜೊತೆಗೆ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಕಂಟ್ರೋಲ್ ರೂಂನಿಂದ 24×7 ಕಣ್ಗಾವಲು ಇಡಲಾಗಿದೆ. ಡ್ರೋನ್ ಮೂಲಕವೂ ವಾಯುಮಾರ್ಗದ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಪ್ರಧಾನಿ ಸಂಚರಿಸುವ ರಸ್ತೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅಲಂಕರಿಸಲಾಗಿದೆ. ರಸ್ತೆ ಬದಿಯಲ್ಲಿರುವ ಕಸ, ಬ್ಯಾನರ್ ಹಾಗೂ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ.
ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದ್ದು,ಮೋದಿ ಅವರ ಸಂಚಾರದ ಸಂದರ್ಭದಲ್ಲಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಸಂಚಾರ ಪೊಲೀಸರು ಪ್ರತಿ ಜಂಕ್ಷನ್‌ನಲ್ಲಿ ನಿಯೋಜನೆಗೊಂಡು ಸುಗಮ ಸಂಚಾರಕ್ಕೆ ಸಹಕಾರ ನೀಡುತ್ತಿದ್ದಾರೆ. ಅಂಬ್ಯುಲೆನ್ಸ್ ಮತ್ತು ತುರ್ತು ಸೇವೆಗಳಿಗೆ ಪ್ರತ್ಯೇಕ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ ಮತ್ತು ವೈದ್ಯಕೀಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರು ತಿಳಿಸಿದ್ದಾರೆ.

