ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಹರಕೆ ತೀರಿಸಿದ ಡಿ.ಕೆ ಶಿ ಪತ್ನಿ ಉಷಾ

ಮೈಸೂರು: ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಅವರು ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು.

ಈ ವೇಳೆ ಉಷಾ ಅವರು ಅವರ ಪುತ್ರ ಆಕಾಶ್ ಸೇರಿದಂತೆ ಕುಟುಂಬ ಸಮೇತ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮೊದಲ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಉಷಾ ಅವರು ತಾಯಿ ಚಾಮುಂಡೇಶ್ವರಿಗೆ ಸೀರೆ ಹರಕೆ ತೀರಿಸಿ ಪೂಜೆ ಸಲ್ಲಿಸಿದರು.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಆಷಾಢ ಶುಕ್ರವಾರ ಸೀರೆ ಉಡಿಸುವುದಾಗಿ ಉಷಾ ಅವರು ಹರಕೆ ಹೊತ್ತಿದ್ದರು. ಅವರ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಹರಕೆ ತೀರಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್,
ಚಾಮುಂಡಿ ಬೆಟ್ಟದ ಕಾರ್ಯದರ್ಶಿ ರೂಪಾ,
ಸ್ಥಳೀಯ ಮುಖಂಡರಾದ ಜಿ ಶ್ರೀನಾಥ್ ಬಾಬು, ಕಿಶೋರ್, ರಾಘವೇಂದ್ರ, ಯೋಗೇಶ್, ಹರೀಶ್ ನಾಯ್ಡು, ಶೇಖರ್, ನವೀನ್ ಕುಮಾರ್ ,ಮಂಜೇಶ್
ಮತ್ತಿತರರು ಹಾಜರಿದ್ದರು.