ಪೊಲೀಸ್ ಅಧಿಕಾರಿಗೆ ಜಮೀನು ಕೊಡಿಸುವ ಆಮಿಷ ವೊಡ್ಡಿ 65 ಲಕ್ಷ ರೂ ಪಂಗನಾಮ!

ಮೈಸೂರು: ಮೋಸ ಹೋಗೋರು ಇರೋತನಕ ಮೋಸ ಮಾಡೋರು ಇದ್ದೇ ಇರ್ತಾರೆ ಇದಕ್ಕೆ ಪೊಲೀಸ್ ಅಧಿಕಾರಿಯೂ ಹೊರತಲ್ಲ.ಇದಕ್ಕೊಂದು ಉದಾಹರಣೆ ಇದೆ.

ಜಮೀನು ಕೊಡಿಸುವ ಆಮಿಷ ನೀಡಿ ಪೊಲೀಸ್ ಅಧಿಕಾರಿಗೇನೆ 65 ಲಕ್ಷ ಪಂಗನಾಮ ಹಾಕಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

ವಂಚಕ ರಿಯಲ್ ಎಸ್ಟೇಟ್ ಗ್ಯಾಂಗ್ ವಿರುದ್ದ ಈಗ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಾಟ ಆಗಿರುವ ಜಮೀನನ್ನೇ ತೋರಿಸಿ ಪೊಲೀಸ್‌ ಅಧಿಕಾರಿಯನ್ನು‌ ಯಾಮಾರಿಸಿ ವಂಚನೆ ಮಾಡಿದ್ದು 5 ಮಂದಿ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಈ ಪ್ರಕರಣದ ಪ್ರಮುಖ ಆರೋಪಿ ನಾರಾಯಣಮೂರ್ತಿ ಕಂಬಿ‌ ಹಿಂದೆ ಇದ್ದಾನೆ.

ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಶ್ರೀನಿವಾಸ್ ವಂಚನೆಗೆ ಒಳಗಾಗಿದ್ದಾರೆ.

ಪದ್ಮಶ್ರೀ ಕನಸ್ಟ್ರಕ್ಷನ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ನಾರಾಯಣಮೂರ್ತಿ ಪತ್ನಿ ಜಯಮಾಲಾ, ಪುತ್ರಿಯರಾದ ಪದ್ಮ, ಭವ್ಯ ಹಾಗೂ ಜಮೀನು ಮಾಲೀಕ ನಾಗೇಗೌಡ ವಿರುದ್ದ ಪ್ರಕರಣ ದಾಖಲಾಗಿದೆ.

ಪತ್ನಿ ಹಾಗೂ ಇಬ್ಬರು ಪುತ್ರಿಯರು ಮತ್ತು ನಾಗೇಗೌಡ ತಲೆ ನಾಪತ್ತೆಯಾಗಿದ್ದಾರೆ.

ಈ ವಂಚಕರು 2025ರಲ್ಲಿ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಬಳಿ 4 ಎಕರೆ ಜಾಗ ತೋರಿಸಿದ್ದರು.

ಬೆಂಗಳೂರಿನಲ್ಲಿದ್ದ ಆಸ್ತಿ ಮಾರಿ ಈ ಜಮೀನು ಖರೀದಿಗೆ ಪಿಎಸ್ಐ ಶ್ರೀನಿವಾಸ್ ಮುಂದಾಗಿದ್ದರು.

ಶ್ರೀನಿವಾಸ್ ಅವರಿಂದ ಹಂತ ಹಂತವಾಗಿ ನಾರಾಯಣಮೂರ್ತಿ 65 ಲಕ್ಷ ರೂ. ವಸೂಲಿ ಮಾಡಿದ್ದಾನೆ,ಆದರೆ ಹಣ ಪಡೆದರೂ ಜಮೀನು ನೋಂದಣಿ ಮಾಡಿಸದೆ ಮೀನಾಮೇಷ ಎಣಿಸುತ್ತಿದ್ದ.

ಅನುಮಾನಗೊಂಡು ಜಮೀನು ದಾಖಲೆ ಪರಿಶೀಲಿಸಿದಾಗ ಇದರ ಮಾಲೀಕ ನಾಗೇಗೌಡ 2025ರಲ್ಲೇ ಮಂಜು ಎಂಬವರಿಗೆ 4 ಎಕರೆ ಜಮೀನು ಮಾರಾಟ ಮಾಡಿರುವುದು ಗೊತ್ತಾಗಿದೆ.

ಪಹಣಿಯಲ್ಲಿ ಇನ್ನೂ ನಾಗೇಗೌಡನ ಹೆಸರೇ ಚಾಲ್ತಿಯಲ್ಲಿದ್ದರಿಂದ ಇವರೇ ಮಾಲೀಕ ಎಂದು ನಂಬಿ ಪಿಎಸ್ಐ ಶ್ರೀನಿವಾಸ್ ಹಣ ನೀಡಿದ್ದರು.

ಅನುಭೋಗ ದಾಖಲೆ ಪರಿಶೀಲಿಸಿದಾಗ ಜಮೀನು ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ನಂತರ ಶ್ರೀನಿವಾಸ್ ಅವರು ದೂರು ನೀಡಿದ್ದು, ನಾರಾಯಣಮೂರ್ತಿ ಸೇರಿ ಐದು ಮಂದಿ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.ಅಲ್ಲದೆ‌ ಮುಖ್ಯ ಆರೋಪಿ ನಾರಾಯಣಮೂರ್ತಿಯನ್ನು ಬಂಧಿಸಿ ತನಿಖೆ ನಡೆಸಲಾಗಿದೆ.