ಚಿನ್ನದ ಪಲ್ಲಕ್ಕಿಯಲ್ಲಿ ಕಂಗೊಳಿಸಿದ ನಾಡ ಅದಿ ದೇವತೆ

ಮೈಸೂರು: ನಾಡ ಅದಿ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವವು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ಚಾಮುಂಡಿ ‌ಬೆಟ್ಟದಲ್ಲಿ ತಾಯಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು, ಹೋಮ, ಹವನಗಳು ನೆರವೇರಿದವು.

ಬೆಳಿಗ್ಗೆ 9 ಗಂಟೆ ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ತಾಯಿಯ ದರ್ಶನ ಪಡೆದು ಪುನೀತರಾದರು.

ಭತ್ತದ ಗೊನೆ, ತೆಂಗಿನ ಗರಿ ಮತ್ತು ವಿವಿಧ ಬಣ್ಣದ ಪುಷ್ಪಗಳಿಂದ ಅಲಂಕರಿಸಲಾಗಿದ್ದ ದೇವಸ್ಥಾನವು ಕಣ್ಮನ ಸೆಳೆಯಿತು.

ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿ ಭವ್ಯ ಮೆರವಣಿಗೆ ಮಾಡಲಾಯಿತು. ಚಿನ್ನದ ಕಾಂತಿಯಲ್ಲಿ ಕಂಗೊಳಿಸಿದ ನಾಡ ದೇವತೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಜಯ ಚಾಮುಂಡೇಶ್ವರಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ರಾಜವಂಶಸ್ಥರು ಹಾಗೂ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕೂಡ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಯ ಆಶೀರ್ವಾದ ಪಡೆದರು.

ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಮಿಲನವಾಗಿದ್ದ ಈ ವರ್ಧಂತಿ ಮಹೋತ್ಸವವು ರಾಜ್ಯದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತು.