ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತರು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸ್ವತಃ ಭಕ್ತರಿಗೆ ಅನ್ನದಾನ ಮಾಡುವ ಮೂಲಕ ವಿಶೇಷ ಸೇವಾ ಕಾರ್ಯ ಮಾಡಿ ಮಾದರಿಯಾಗಿದ್ದಾರೆ.
ನಗರ ಪೊಲೀಸ್ ಇತಿಹಾಸದಲ್ಲೇ ಒಬ್ಬ ಪೊಲೀಸ್ ಆಯುಕ್ತರು ಚಾಮುಂಡಿ ಬೆಟ್ಟದಲ್ಲಿ ಈ ರೀತಿ ಭಕ್ತಿ ಸೇವೆ ಮಾಡಿರುವುದು ಇದೇ ಮೊದಲು.
ದರ್ಶನಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ಆಯುಕ್ತರು ಯಾವುದೇ ವಿಐಪಿ ವ್ಯವಸ್ಥೆ ಇಲ್ಲದೆ, ಸಾಮಾನ್ಯರಂತೆ ಸಾಲಿನಲ್ಲಿ ನಿಂತು ತಮ್ಮ ಆಯುಕ್ತರಾದ ಸೀಮಾ ಲಾಟ್ಕರ್ ಅವರು ತಮ್ಮ ಕೈಯಾರೆ ಅನ್ನ, ಸಾಂಬಾರ್ ಮತ್ತು ಪ್ರಸಾದವನ್ನು ವಿತರಿಸಿದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ವಿಶೇಷ ಆದ್ಯತೆ ನೀಡಲಾಯಿತು.
ಎಲ್ಲಾ ಆಡಳಿತಾತ್ಮಕ ಕೆಲಸಗಳನ್ನು ಬದಿಗಿಟ್ಟು ಜನರ ಸೇವೆಗೆ ಮಹತ್ವ ನೀಡಿದ ಆಯುಕ್ತರ ಈ ಕಾರ್ಯಕ್ಕೆ ಮೈಸೂರಿನ ಜನರು ಮನಸಾರೆ ಆಶೀರ್ವದಿಸಿದ್ದಾರೆ.ಇಂತಹ ಅಧಿಕಾರಿಗಳು ನಮಗೆ ಬೇಕು ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಆಯುಕ್ತರ ಜೊತೆಗೂಡಿ ಪ್ರಸಾದ ವಿತರಣೆಯಲ್ಲಿ ಸಹಕರಿಸಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಶಿಸ್ತುಬದ್ಧವಾಗಿ ವ್ಯವಸ್ಥೆ ಮಾಡಿದ್ದು ವಿಶೇಷ.
ಪೊಲೀಸ್ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಮಾತ್ರವಲ್ಲ, ಜನರೊಂದಿಗೆ ಬೆರೆತು ಸೇವೆ ಮಾಡುವುದೂ ನಮ್ಮ ಕರ್ತವ್ಯ ಎಂಬ ಸಂದೇಶವನ್ನು ಈ ಮೂಲಕ ಆಯುಕ್ತರು ನೀಡಿದ್ದಾರೆ.
ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ,ಎಲ್ಲೆಡೆ ಆಯುಕ್ತರ ಈ ಸೇವೆಯನ್ನು ಕೊಂಡಾಡುತ್ತಿದ್ದಾರೆ.

