ಪಾರ್ಕಿಂಗ್ ಶುಲ್ಕದ ವಿರುದ್ಧ ಜೆಡಿಎಸ್ ಹೋರಾಟದ ಎಚ್ಚರಿಕೆ

ಬೆಂಗಳೂರು:‌ ಮನೆ ಮುಂದೆ ನಿಲ್ಲಿಸಲಾಗುವ ಮನೆ ಮಾಲೀಕರ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡರು,ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಕೃಷ್ಣಭೈರೇಗೌಡ ಅವರೇ ಇದ್ಯಾವ ಸೀಮೆ ಆಡಳಿತ ನಿಮ್ಮದು ಎಂದು ಪ್ರಶ್ನಿಸಿದರು.

ವಿಧಾನಸೌಧ, ಜಿಬಿಎ, ನ್ಯಾಯಾಲಯಗಳ ಸಂಕೀರ್ಣಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗದ ನಿಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಾರ್ವಜನಿಕರ ಮೇಲೆ ಬರೆ ಹಾಕುತ್ತಿದ್ದೀರಿ. ಇದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಉಚ್ಚ ನ್ಯಾಯಾಲಯ, ಸಿಟಿ ನ್ಯಾಯಾಲಯಗಳ ಸಂಕೀರ್ಣ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಎನ್ನುವುದು ಸರ್ಕಾರಕ್ಕೆ ಗೊತ್ತಿಲ್ಲವೇ, ವಿಧಾನಸೌಧಕ್ಕೆ ಹೋಗುವ ಸಾರ್ವಜನಿಕರಿಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದರೆ ಈ ವ್ಯವಸ್ಥೆಗೆ ಏನು ಹೇಳಬೇಕು, ಪಾಲಿಕೆ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಅಂದರೆ ಜಿಬಿಎಗೆ ಏನೆನ್ನಬೇಕು, ನಗರದ ಬಹುತೇಕ ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇಲ್ಲ. ತಪ್ಪು ಸರ್ಕಾರದ್ದಾಗಿದ್ದರೆ ಅದರ ಪ್ರತಿಫಲವನ್ನು ಸಾರ್ವಜನಿಕರು ಅನುಭವಿಸಬೇಕು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಕಡಕ್ಕಾಗಿ ಹೇಳಿದರು.

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮಂತ್ರಿಗಳಾದ ಕೃಷ್ಣಭೈರೇಗೌಡರ ಮನೆ ಸಮೀಪವಿರುವ ಅಪಾರ್ಟ್ಮೆಂಟ್ ಮುಂದೆಯೇ ಪಾರ್ಕಿಂಗ್ ಮಾಡಲು ಜಾಗವಿಲ್ಲ. ಆ ಅಪಾರ್ಟ್ಮೆಂಟಿಗೆ ಬರುವ ಅತಿಥಿಗಳು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬುದನ್ನು ನಗರಾಭಿವೃದ್ಧಿ ಸಚಿವರೇ ಹೇಳಬೇಕು ಎಂದು ರಮೇಶ್ ಗೌಡ ಹೇಳಿದರು.

ಜೆ.ಸಿ. ರಸ್ತೆಯಲ್ಲಿ ಬೃಹತ್ ಪಾರ್ಕಿಂಗ್ ಕಟ್ಟಡವನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗಿದೆ. ದುರಂತವೆಂದರೆ ಈ ಕಟ್ಟಡವನ್ನು ಖಾಸಗಿ ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆಗೆ ನೀಡಲಾಗಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ‌ಛೀಮಾರಿ ಹಾಕಿದರು.

ಜಿಬಿಎ ಅದೆಷ್ಟು ಅದಕ್ಷತೆಯಿಂದ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೆ.ಸಿ. ರಸ್ತೆಯ ಪಾರ್ಕಿಂಗ್ ಕಟ್ಟಡವನ್ನು ಬಾಡಿಗೆಗೆ ನೀಡಿರುವ ಪ್ರಕರಣ ಸಾಕ್ಷಿ. ಸರ್ಕಾರವು ತನ್ನ ವೈಫಲ್ಯಗಳಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಕಾರು ನಿಲ್ಲಿಸಿದರೆ ಅದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸುವ ಹುನ್ನಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ರಮೇಶ್ ಗೌಡ ಎಚ್ಚರಿಸಿದರು.

ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ ಸರ್ಕಾರ ನಿರ್ಲಕ್ಷ ಮಾಡಿದೆ. ಅಂತದ್ದರಲ್ಲಿ ತಮ್ಮ ಮನೆಗಳ ಮುಂದೆ ಮನೆ ಮಾಲೀಕರು ವಾಹನಗಳನ್ನು ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸಲು ಹೊರಟಿರುವುದು ಸರಿಯಲ್ಲ ಎಂದು ಕಟುವಾಗಿ ಟೀಕಿಸಿದರು.

ತಕ್ಷಣವೇ ಜಿಬಿಎ ಪಾರ್ಕಿಂಗ್ ಶುಲ್ಕ ವಿಧಿಸುವ ನಿರ್ಧಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಮೇಶ್ ಗೌಡ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಈ ಕೃಷ್ಣಪ್ಪ, ಅಖಂಡ ಶ್ರೀನಿವಾಸಮೂರ್ತಿ, ಮುಖಂಡರಾದ ತಿಮ್ಮೇಗೌಡ, ದೇವರಾಜ್, ಹೆಚ್.ಸಿ.ಕೃಷ್ಣ, ಶೈಲಜಾ ರಾವ್, ಟಿ.ಆರ್.ತುಳಸಿ ರಾಮ್, ಎಸ್. ರಮೇಶ, ಶ್ವೇತಾ ಯಾದವ್, ಮಂಗಳಮ್ಮ, ಆರ್.ಸ್ಯಾಮುಯೆಲ್ ಮತ್ತಿತರರು ಉಪಸ್ಥಿತರಿದ್ದರು.