ಮೈಸೂರು: ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 28ನೇ ಪೀಠಾಧಿಪತಿ ಪರಮಪೂಜ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವ ಶನಿವಾರ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠ ನಿರ್ದೇಶಕರಾದ ಬೆಟ್ಸೂರ್ ಮಟ್ ಅವರು,ಆ.29ರಂದು ಶನಿವಾರ ಮೈಸೂರಿನ ಸುತ್ತೂರು ಶ್ರೀಮಠದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ತಿಳಿಸಿರು.
ಪರಮಪೂಜ್ಯ ಶ್ರೀಗಳು 29-08-1916ರಲ್ಲಿ ಜನಿಸಿ, 28-02-1928ರಲ್ಲಿ 12ನೇ ವಯಸ್ಸಿನಲ್ಲಿ ಪಟ್ಟಾಧಿಕಾರ ವಹಿಸಿ ಅನ್ನ, ಅಕ್ಷರ, ಆರೋಗ್ಯದ ಮೂಲಕ ಸಮಾಜ ಸೇವೆಗೆ ಭದ್ರ ಬುನಾದಿ ಹಾಕಿದ ಮಹಾನ್ ಚೇತನ ಎಂದು ಅವರು ಬಣ್ಣಿಸಿದರು.
ರೋಬೋಟ್ ಆನೆ ಮೆರವಣಿಗೆ:
ಪ್ರಾಣಿದಯೆ ಮತ್ತು ವನ್ಯಜೀವಿ ಸಂರಕ್ಷಣೆ ಸಂದೇಶಕ್ಕಾಗಿ ಈ ಬಾರಿ ನೈಜ ಆನೆ ಬದಲಿಗೆ ರೋಬೋಟ್ ಆನೆ ಮೇಲೆ ಪೂಜ್ಯರ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಬೆಳಿಗ್ಗೆ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಿಂದ ಶ್ರೀಮಠದವರೆಗೆ ರೋಡ್ ಶೋ ನಡೆಯಲಿದೆ ಎಂದು ತಿಳಿಸಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಡಾ.ಜಿ.ಪರಮೇಶ್ವರ್ – ಜೆಎಸ್ಎಸ್ ವಿಜ್ಞಾನ ವಾಹಿನಿ ಗೆ ಚಾಲನೆ ನೀಡಲಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ ರಾಜೇಂದ್ರ ನುಡಿ ನಮನ 2ನೇ ಆವೃತ್ತಿ ಬಿಡುಗಡೆ ಗೊಳಿಸುವರು. ಸಚಿವ ಸಿ.ಪುಟ್ಟರಂಗಶೆಟ್ಟಿ – ‘Man with Divinity: Poojya Rajendra Shree’ ಬಿಡುಗಡೆ ಮಾಡಲಿದ್ದಾರೆ. ಶಾಸಕ ಡಾ.ಹೆಚ್.ಸಿ.ಮಹದೇವಪ್ಪ – ‘ನಮ್ಮೊಳಗಿಂದ ದೈವ: ಪೂಜ್ಯ ರಾಜೇಂದ್ರ ಶ್ರೀ’ ಬಿಡುಗಡೆ ಮಾಡುವರು.
ಸಂಸದ ಯದುವೀರ್ ಒಡೆಯರ್ – ಪ್ರಸಾದ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದು, ಮಾಜಿ ಸಂಸದ ಸುನೀಲ್ ಬೋಸ್ – ಜೆಎಸ್ಎಸ್ ವಾರ್ತಾಪತ್ರ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು ಎಂದು ಬೆಟ್ಸೂರ್ ಮಟ್ ಮಾಹಿತಿ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಂಸ್ಥೆಯಿಂದ ನಿವೃತ್ತರಾದ 115 ನೌಕರರು ಹಾಗೂ 51 ಮಂದಿ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಗುವುದು.
ಶ್ರೀಗಳ ಜಯಂತಿ ಅಂಗವಾಗಿ ಮೈಸೂರು ಮೃಗಾಲಯಕ್ಕೆ 1 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.
ಭಕ್ತಾದಿಗಳಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಬೆಟ್ ಸೂರ್ ಮಠ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

