ಸಂಭ್ರಮದಿಂದ ಅರಮನೆ ಪ್ರವೇಶಿಸಿದ ಗಜಪಡೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಈಗಾಗಲೇ ಕಳೆಗಟ್ಟಲಾರಂಭಿಸಿದೆ‌

ಕಳೆದ ಎರಡು ದಿನಗಳಿಂದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದ ಗಜಪಡೆ ಇಂದು ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅರಮನೆಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಮುಂಜಾನೆಯೇ ಮಾವುತರು ಆನೆಗಳಿಗೆ ಸ್ನಾನ ಮಾಡಿಸಿ, ಅಲಂಕರಿಸಿ ಪ್ರಯಾಣಕ್ಕೆ ಸಿದ್ಧಗೊಳಿಸಿದರು.

ಬೆಳಗ್ಗೆ 9 ಗಂಟೆಗೆ ಅರಣ್ಯ ಭವನದಿಂದ ಗಜಪಯಣ ಆರಂಭವಾಗುತ್ತಿದ್ದಂತೆ ಇಡೀ ರಸ್ತೆಯಲ್ಲಿ ಸಡಗರ ಮನೆಮಾಡಿತ್ತು‌

ಅರಣ್ಯ ಭವನದಿಂದ ಅರಮನೆಯ ಜಯಮಾರ್ತಾಂಡ ದ್ವಾರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನತೆ, ಶಾಲಾ ಮಕ್ಕಳು ಸಾಲುಗಟ್ಟಿ ನಿಂತು ಗಜಪಡೆಯನ್ನು ಕಣ್ತುಂಬಿಕೊಂಡರು.

ಪೊಲೀಸರು ಇಕ್ಕೆಲಗಳಲ್ಲಿ ಹಗ್ಗ ಹಿಡಿದು ಜನರನ್ನು ನಿಯಂತ್ರಿಸಿ, ಗಜಪಡೆ ಸಾಗಲು ಅನಯವು ಮಾಡಿಕೊಟ್ಟರು.

ಆನೆಗಳು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿ, ಮೊಬೈಲ್ ನಲ್ಲಿ ಫೋಟೋ, ವಿಡಿಯೋ ಸೆರೆಹಿಡಿದು ಖುಷಿ ಪಟ್ಟರು.

ಬೆಳಗ್ಗೆ 9:52 ರಿಂದ 10:19ರ ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅರಮನೆ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕ ಪೂಜೆ, ಪೂರ್ಣಕುಂಭ ಸ್ವಾಗತ ನಡೆಯಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ‌ಸಿದ್ದರಾಮಯ್ಯ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಶಾಸಕರುಗಳಾದ ಶ್ರೀವತ್ಸ, ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರುಗಳಾದ ರಘು, ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ, ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪಾಲಿಕೆ ಆಯುಕ್ತರಾದ ಸವಿತಾ,ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ಹಾಗೂ ದಸರಾ ಕಲಾ ತಂಡದ ಸದಸ್ಯರು ಉಪಸ್ಥಿತರಿದ್ದು ಆನೆಗಳಿಗೆ ಹೂಮಾಲೆ ಹಾಕಿ, ಕಬ್ಬು, ಬೆಲ್ಲ, ಹಣ್ಣುಗಳನ್ನು ನೀಡಿ ಬರಮಾಡಿಕೊಂಡರು.

ಧನಂಜಯ (45), ಪ್ರಶಾಂತ (54), ಗೋಪಿ (43), ಶ್ರೀರಾಮ (41), ಕಾವೇರಿ (46), ಮಹೇಂದ್ರ (42), ಲಕ್ಷ್ಮೀ (54), ಏಕಲವ್ಯ (41), ಶ್ರೀಕಂಠ (57)
ಇಂದು ಅರಮನೆ ಪ್ರವೇಶಿಸಿದವು.

ಇಂದು ಸಂಜೆ ಎಲ್ಲಾ ಆನೆಗಳ ತೂಕ ಪರೀಕ್ಷೆ ನಡೆಸಿ, ನಾಳೆಯಿಂದ ಅರಮನೆ ಆವರಣದಲ್ಲಿ ಜಂಬೂಸವಾರಿ ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್ ಪ್ರಭುಗೌಡ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.