ಮೈಸೂರು: ಗಣೇಶ ಹಬ್ಬ ಆಚರಣೆ ವೇಳೆ ಕಠಿಣ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಇದು ಸರಿಯಲ್ಲ. ರಾಜ್ಯದಲ್ಲಿ ಇರುವುದು ಹಿಂದೂ ವಿರೋಧಿ ಸರ್ಕಾರ ಎಂದು ಸಂಸದ ಯದುವೀರ್ ಒಡೆಯರ್ ಆರೋಪಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಕೂರಿಸಲು ಮತ್ತು ಮೆರವಣಿಗೆ ಮಾಡಲು ಷರತ್ತು ಹಾಕುವುದು ಹೊಸದಲ್ಲ. ಕಳೆದ 3 ವರ್ಷಗಳಿಂದಲೂ ಈ ಸರ್ಕಾರ ಇದನ್ನೇ ಮಾಡಿಕೊಂಡು ಬಂದಿದೆ. ಹಿಂದೂಗಳು ಹಬ್ಬ ಆಚರಿಸಲು ಕಠಿಣ ಷರತ್ತು ಹಾಕುತ್ತಾರೆ. ತಿ.ನರಸೀಪುರದಲ್ಲಿ ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಬೇಡಿ ಎನ್ನುತ್ತಾರೆ. ಎಲ್ಲ ಬೀದಿಗಳಲ್ಲೂ ಮೆರವಣಿಗೆ ಮಾಡಬಹುದು. ದೇವಸ್ಥಾನ ಇದೆ ಮೆರವಣಿಗೆ ಹೋಗಬೇಡ, ಮಸೀದಿ ಇದೆ ಮೆರವಣಿಗೆ ಹೋಗಬೇಡ ಎನ್ನುವುದು ಸರಿಯಲ್ಲ ಎಂದು ಹೇಳಿದರು.
ಮಸೀದಿಗೋಸ್ಕರ ಆ ರಸ್ತೆಯಲ್ಲೇ ಹೋಗಬೇಡಿ ಎನ್ನುವುದು ಸೂಕ್ತವಲ್ಲ. ಇವರೇ ಜನರಲ್ಲಿ ಇಲ್ಲದ ಭಾವನೆ ತುಂಬುತ್ತಾರೆ. ಚಾಮುಂಡಿ ಬೆಟ್ಟದ ವಿಚಾರದಲ್ಲೂ ಹೀಗೆ ನಡೆದುಕೊಂಡರು. ಚಾಮುಂಡಿ ಹಿಂದೂಗಳದ್ದಲ್ಲ, ಜಾತ್ಯಾತೀತ ಎಂದರು. ಈ ಸರ್ಕಾರಗಳಿಂದ ನಾವು ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಂಬಳಕ್ಕೆ ನಾವು ವಿರೋಧಿಗಳಲ್ಲ. ಆದರೆ ದಸರಾದಲ್ಲಿ ಬೇಡ ಎಂದು ಹೇಳಿದ್ದೆವು. ವಿರೋಧದ ನಡುವೆಯೂ ಕಂಬಳ ಮಾಡುತ್ತಿದ್ದಾರೆ. ಕಂಬಳ ಕರಾವಳಿ ಭಾಗದ ಅವಿಭಾಜ್ಯ ಅಂಗ. ನಾವೂ ಅದನ್ನು ಗೌರವದಿಂದ ಕಾಣುತ್ತೇವೆ. ಮೈಸೂರಿನಲ್ಲಿ ಕಂಬಳ ತಂದು ಮೈಸೂರು ಮತ್ತು ಕರಾವಳಿ ನಡುವೆ ಭಿನ್ನಾಭಿಪ್ರಾಯ ತರುವ ಯತ್ನ ಇದಾಗಿದೆ ಎಂದು ಸಂಸದರು ಟೀಕಿಸಿದರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಕೊಡಗಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ನಾವು ಜನರ ಪರ ಇದ್ದೇವೆ. ಕರಡು ಅಧಿಸೂಚನೆ ಅನುಷ್ಠಾನ ಮಾಡಲು ಸಾಧ್ಯವಿಲ್ಲ.
ಈ ಬಗ್ಗೆ ರಾಜ್ಯ ಸರ್ಕಾರ ಗ್ರಾಮ ಸಭೆಗಳನ್ನು ಮಾಡಿ ಜನರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಬೇಕು. ಆದರೆ ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ. ಕೇವಲ ವಿರೋಧ ಮಾಡುತ್ತಿದ್ದು, ಸಲಹೆಗಳನ್ನೇ ನೀಡುತ್ತಿಲ್ಲ. ಕಸ್ತೂರಿ ರಂಗನ್ ವರದಿಗೆ ಪರಿಹಾರ ಬೇಕಿದೆ, ಹೋರಾಟ ಅಥವಾ ವಿರೋಧ ಅಲ್ಲ ಎಂದು ಯದುವೀರ್ ತಿಳಿಸಿದರು.

