ಹೂಟಗಳ್ಳಿ, ಎಂಡಿಎ ಬಡಾವಣೆಗಳಿಗೆ ನೀರು ಹರಿಸಲು ಜಿ.ಟಿ.ದೇವೇಗೌಡ ಸೂಚನೆ

ಮೈಸೂರು: ಹೂಟಗಳ್ಳಿ, ಎಂಡಿಎ ಹಾಗೂ ಖಾಸಗಿ ಬಡಾವಣೆಗಳಿಗೆ ಕಬಿನಿ ನದಿ ಮೂಲದಿಂದ ಒಪ್ಪಂದದಂತೆ ನೀರು ಹರಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅವರು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಪಾಲಿಕೆ ವಲಯ ಕಚೇರಿ-3ರ ಸಭಾಂಗಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಬಿನಿ ನದಿ ಮೂಲದಿಂದ ನೀರು ತರುವಾಗ ಎಂಡಿಎ ಹಾಗೂ ಅನುಮೋದಿತ ಬಡಾವಣೆಗಳಿಗೆ ನೀರು ಕಲ್ಪಿಸುವ ಒಪ್ಪಂದದಂತೆ ಸುಮಾರು 30 ಕೋಟಿ ರೂ. ಪಾಲು ನೀಡಲಾಗಿದೆ. ಆದರೂ ಒಪ್ಪಂದದಂತೆ ನೀರು ಮೀಸಲಿಟ್ಟು ಸರಬರಾಜು ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೂಟಗಳ್ಳಿ ನಗರಸಭೆಗೆ 6 ಎಂಎಲ್‌ಡಿ ನೀರು ಕೊಡಲು ಸೂಚನೆ ನೀಡಿದ್ದರೂ ಈಗ 4 ಎಂಎಲ್‌ಡಿ ಮಾತ್ರ ನೀಡಲಾಗುತ್ತಿದೆ, ಇದರಿಂದ ಸಮಸ್ಯೆಯಾಗಿದೆ ಎಂದು ಪೌರಾಯುಕ್ತ ನರಸಿಂಹಮೂರ್ತಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಇಇ ಮೋಹನ್, ನಾವು 4 ಎಂಎಲ್‌ಡಿ ನೀಡುತ್ತಿದ್ದೇವೆ, 6 ಎಂಎಲ್‌ಡಿ ಕೊಟ್ಟರೆ ನಗರ ಭಾಗಕ್ಕೆ ನೀರು ಸರಿದೂಗಿಸಲು ಸಮಸ್ಯೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಕಬಿನಿ ಯೋಜನೆ ರೂಪಿಸುವಾಗಲೇ ಬಡಾವಣೆಗಳಿಗೆ ನೀರು ಕೊಡುವುದಾಗಿ ಒಪ್ಪಂದವಾಗಿದೆ, ಅದಕ್ಕೆ ತಕ್ಕಂತೆ ಪಾಲು ನೀಡಲಾಗಿದೆ. ಮೈಸೂರು ನಗರಕ್ಕೆ 300 ಎಂಎಲ್‌ಡಿ ನೀರು ಹರಿಸುವಾಗ ಹೂಟಗಳ್ಳಿಗೆ 6 ಎಂಎಲ್‌ಡಿ ಕೊಡಲು ಸಮಸ್ಯೆ ಏನು,300 ಎಂಎಲ್‌ಡಿಯಲ್ಲಿ 1 ಎಂಎಲ್‌ಡಿ ಕಡಿಮೆಯಾದರೆ ತೊಂದರೆ ಆಗುವುದಿಲ್ಲ, ಆದರೆ ಹೂಟಗಳ್ಳಿಗೆ 1 ಎಂಎಲ್‌ಡಿ ಕಡಿಮೆಯಾದರೆ ದೊಡ್ಡ ಸಮಸ್ಯೆಯಾಗುತ್ತದೆ. ಮೂರು ಸಭೆಗಳಿಂದ ಹೇಳುತ್ತಿದ್ದರೂ ಯಾಕೆ ಹೀಗೆ ಮಾಡುತ್ತಿದ್ದೀರಿ, ಒಪ್ಪಂದದಂತೆ ಕಡ್ಡಾಯವಾಗಿ 6 ಎಂಎಲ್‌ಡಿ ನೀಡಬೇಕು‌ ಎಂದು ಸೂಚಿಸಿದರು ಮತ್ತೆ ಈ ರೀತಿಯ ದೂರು ಬರಬಾರದು ಎಂದು ಖಡಕ್ ಎಚ್ಚರಿಕೆ ಕೂಡಾ ನೀಡಿದರು.

ಹೂಟಗಳ್ಳಿ ವ್ಯಾಪ್ತಿಯಲ್ಲಿ 206 ಬೋರ್‌ವೆಲ್‌ಗಳಿದ್ದು, 101 ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ, 32 ಬತ್ತಿ ಹೋಗಿವೆ. ಸಿಎಸ್‌ಆರ್ ಪಾಯಿಂಟ್, ಹಿನಕಲ್, ಹೂಟಗಳ್ಳಿಗೆ ನೀರು ಪೂರೈಕೆ ಪ್ರಮಾಣ ಕಡಿಮೆಯಾಗಿದೆ ಎಂದು ಪೌರಾಯುಕ್ತರು ಶಾಸಕರ ಗಮನಕ್ಕೆ ತಂದರು.

ವಿದ್ಯುತ್ ಸಮಸ್ಯೆ ಕುರಿತು ಪ್ರಶ್ನಿಸಿದ ಶಾಸಕರು, ಒಂದು ವಾರದಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿದ್ಯುತ್ ನೀಡದೆ ಸಮಸ್ಯೆಯಾಗಿದೆ. ಬೆಳಿಗ್ಗೆ ಲೋಡ್ ಶೆಡ್ಡಿಂಗ್ ಮಾಡಿದರೆ ಸಹಿಸಬಹುದು, ರಾತ್ರಿ ವೇಳೆ ಕರೆಂಟ್ ಇಲ್ಲದಿದ್ದರೆ ಜನರ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸೆಸ್ಕ್ ಎಇಇ, ರಾಯಚೂರು ವಿದ್ಯುತ್ ಸ್ಥಾವರ ಘಟಕದಲ್ಲಿ ಸಮಸ್ಯೆಯಾಗಿರುವ ಕಾರಣ ಇಡೀ ರಾಜ್ಯಾದ್ಯಂತ ಸಮಸ್ಯೆಯಾಗಿದೆ. ನಾಲ್ಕು ದಿನಗಳ ಕಾಲ ಸಮಸ್ಯೆಯಾಗಿ 220 ಕೆವಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು, ಈಗ ಸರಿ ಹೋಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಎಂಡಿಎ ಆಯುಕ್ತ ಬಿ.ಆರ್.ಮಹೇಶ್, ಕಾರ್ಯದರ್ಶಿ ಜಾನ್ಸನ್, ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಅಧೀಕ್ಷಕ ಅಭಿಯಂತರ ಕೆ.ಜೆ.ಸಿಂಧು, ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್, ಮೋಹನ್, ಇಕ್ಬಾಲ್ ಮೊಹಮ್ಮದ್ ಆಸಿಫ್, ತಾಪಂ ಇಒ ಕೃಷ್ಣ, ಪೌರಾಯುಕ್ತ ನರಸಿಂಹಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.