ದಸರಾ ಜಂಬೂಸವಾರಿ ಕಲಾ ಪ್ರದರ್ಶನ ವಿನೂತನವಾಗಿರಲಿ: ಡಾ.ಯತೀಂದ್ರ

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯ ಕಲಾ ಪ್ರದರ್ಶನ ವ್ಯಳವಸ್ಥಿತ ಮತ್ತು ವಿನೂತನವಾಗಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಒಂದೇ ಕಲಾಪ್ರಕಾರದಲ್ಲಿ ಒಂದಕ್ಕಿಂತ ಹೆಚ್ಚು ಕಲಾತಂಡಗಳನ್ನು‌ ಆಯ್ಕೆ ಮಾಡಿದಾಗ ಎಲ್ಲಾ ತಂಡಗಳು‌ ಗುಂಪು ಅಭ್ಯಾಸ ನಡೆಸಿ ಏಕರೂಪದಲ್ಲಿ ಪ್ರದರ್ಶನ ನೀಡುವಂತೆ ಮುಂಚಿತವಾಗಿ ತಾಲೀಮು ನಡೆಸುವಂತೆ ಸಲಹೆ ನೀಡಿದರು.

ಗೋಲ್ಡ್ ಕಾರ್ಡ್ ಖರೀದಿ ಮಾಡಿದವರಿಗೆ ಸೀಟ್ ಸಂಖ್ಯೆ ನಮೂದಿಸಿ ಆಸನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಚಿಸಲಾಗಿರುವ ಉಪಸಮಿತಿಯಲ್ಲಿ ಅಧಿಕಾರಿಗಳು ಯಾವುದೇ ಲೋಪವಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾ ಹಾಗೂ ಕುಸ್ತಿ ಪಟುಗಳ ವಾಸ್ತವ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಮಹಿಳಾ ದಸರಾ‌ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಗೆ ಹೆಚ್ಚಿ‌ನ ಸ್ಥಳಾವಕಾಶವಿರುವ ರಸ್ತೆ ಆಯ್ಕೆ ಮಾಡಿ ರಂಗೋಲಿಗಳು ವಿನೂತನವಾಗಿ ಉತ್ತಮ ಸಂದೇಶ ನೀಡುವ ರೀತಿ ಇರಲಿ ಎಂದು ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ವತಿಯಿಂದ ಸಾಕ್ಷ್ಯಚಿತ್ರ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ರಾಜ್ಯದ ಒಟ್ಟು 30 ಜಿಲ್ಲೆಗಳ ಸ್ಥಬ್ದ ಚಿತ್ರಗಳ ಪೈಕಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಉತ್ತಮ 15 ಜಿಲ್ಲೆಯ ಸ್ಥಬ್ದಚಿತ್ರವನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ತಿಳಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸುವ ಸ್ಥಬ್ದಚಿತ್ರ ಹಾಗೂ ಕಲಾತಂಡಗಳಿಗೆ ಜಂಬೂಸವಾರಿಯಲ್ಲಿ ಸಾಗುವಾಗ ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ನೀಡಲು ಸಮಯ ನಿಗದಿ ಮಾಡಿ ಶಿಸ್ತುಬದ್ಧವಾಗಿ ಸಾಗಲು ವ್ಯವಸ್ಥೆ ಮಾಡಿ ಎಂದು ಹೇಳಿದರು.

ದಸರಾ ಮಹೋತ್ಸವಕ್ಕೆ ಹೊರ ದೇಶಗಳಿಂದ‌ ರಾಯಭಾರಿಗಳನ್ನು ಆಹ್ವಾನಿಸಲಾಗುತ್ತಿದ್ದು, ಈಗಾಗಲೇ‌ ಮೂರು ಮಂದಿ ಒಪ್ಪಿಗೆ ಸಹ ನೀಡಿದ್ದಾರೆ. ಅವರನ್ನು ಶಿಷ್ಠಾಚಾರದಂತೆ ಆಹ್ವಾನಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು,ದಸರಾ ಮಹೋತ್ಸವದ ಡ್ರೋಣ್ ಶೋ ಗೆ ವಿಷಯವಾರು ಮಾಡಲ್ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ‌ ಹರೀಶ್ ಗೌಡ ಅವರು ಮಾತನಾಡಿ ಮೈಸೂರಿನಲ್ಲಿರುವ ವಿವಿಧ ವೃತ್ತಗಳಿಗೆ ತನ್ನದೇ ಆದ ಇತಿಹಾಸವಿದೆ. ವೃತ್ತಗಳಿಗೆ ಅದರ ವಿಶೇಷತೆಗೆ ಅನುಗುಣವಾಗಿ ವಿದ್ಯುತ್ ದೀಪಾಲಂಕಾರ ಮಾಡಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ‌ ಅವರು ಈ ಬಾರಿ ವಿನೂತನವಾಗಿ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಮೈಸೂರು ನಗರ ಪೊಲೀಸ್ ಆಯುಕ್ತರಾದ ‌ಸೀಮಾ ಲಾಟ್ಕರ್ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ‌ ಬಾಲದಂಡಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಯುಕೇಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್ ರವಿ,ಮೈಸೂರು ಮಹಾನಗರ ಪಾಲಿಕೆ ಉಪ ಆಯಕ್ತೆ ವೀಣಾ,ಭೂ ದಾಖಲೆಗಳ ಉಪನಿರ್ದೇಶಕಿ ರಮ್ಯ ಮಾತನಾಡಿ ವಿವಿಧ ಕಾರ್ಯಕ್ರಮ ಗಳ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ದಸರಾ- 2026 ರ ವೆಬ್ ಸೈಟ್ ಗೆ https://mysoredasara.gov.in
ಚಾಲನೆ ನೀಡಲಾಯಿತು. ದಸರಾ ಯುವ ಸಂಭ್ರಮ ಪೋಸ್ಟರ್ ಬಿಡುಗಡೆ ಮಾಡಿದರು.

ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ‌.ಕೆ ಸವಿತಾ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.