ತುಳು ಭಾಷೆ ಎರಡನೇ ಹೆಚ್ಚುವರಿ ಆಡಳಿತ ಭಾಷೆ-ಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು: ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಇಷ್ಟೇ ಅಲ್ಲದೆ ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ ಸೇರಿದಂತೆ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಉಳಿದ ಮೊತ್ತ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಜನರ ಭಾವನೆಯನ್ನು ಗೌರವಿಸಿದೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಎರಡನೇ ಆಡಳಿತ ಭಾಷೆಯಾಗಿ ಘೋಷಣೆಯಾಗಬೇಕೆನ್ನುವ ಬೇಡಿಕೆ ಬಹಳ ದಿನಗಳದ್ದು. ಹಿಂದಿನವರು ಈ ತೀರ್ಮಾನ ಏಕೆ ಮಾಡಲಿಲ್ಲ ಎಂದು ಚರ್ಚಿಸುವುದಿಲ್ಲ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ,ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ ಎಂದು ತಿಳಿಸಿದರು.

ಸಚಿವ ಸಂಪುಟ ನಿಮ್ಮ ಜೊತೆ ಇದೆ. ತುಳು ಭಾಷೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗುವುದು.

ಮಾಜಿ ಸಚಿವ ರಮಾನಾಥ ರೈ ಅವರು ತುಳು ಭಾಷೆಗೆ 2 ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಮೊದಲು ಬೇಡಿಕೆ ಇಟ್ಟಿದ್ದರು ಎಂದು ಸ್ಮರಿಸಿದರು. ಸಚಿವ ಯು.ಟಿ. ಖಾದರ್‌, ಶಾಸಕ ಅಶೋಕ್‌ ಕುಮಾರ್‌ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಒಟ್ಟಾಗಿ ಒತ್ತಡ ಹೇರಿದ್ದರು ಎಂದು ಸಿಎಂ ತಿಳಿಸಿದರು.

ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡದ ಬದಲಿಗೆ ಮಂಗಳೂರು ಎಂದು ಹೆಸರಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಶಕ್ತಿ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದರು.

ಬೆಂಗಳೂರಿನಿಂದಾಚೆಗೆ ಮಂಗಳೂರಿನಲ್ಲಿ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವಾಗತಾರ್ಹ. ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಮುಂದಿನ 15 ತಿಂಗಳ ಅವಧಿಯಲ್ಲಿ 10 – 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ,
ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕವಾಗಿಸುವುದು ನಮ್ಮ ಗುರಿ ಎಂದು ಸಿಎಂ ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆದಿರುವ ಜಿಲ್ಲೆ. ಇಡೀ ದೇಶ ದಕ್ಷಿಣ ಕನ್ನಡದ ಇತಿಹಾಸ ಪರಂಪರೆಯನ್ನು ತಿಳಿದಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಅಳಿಲು ಸೇವೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿದೆ ಎಂದರು.

ಪಕ್ಷಭೇದ ಮರೆತು ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರೂ ಸೇರಿದಂತೆ ಸಲಹೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ಡಿಕೆಶಿ‌ ಹೇಳಿದರು.