ಆಕಾಶದಲ್ಲಿ ಗಾಳಿಗೋಪುರ ಕಟ್ಟಿ ಜನರ ಕಣ್ಣಿಗೆ ಮಣ್ಣೆರಚಬೇಡಿ: ಅಶೋಕ್

ಬೆಂಗಳೂರು: ಅಂಗೈಯಲ್ಲಿ ಅರಮನೆ, ಆಕಾಶದಲ್ಲಿ ಗಾಳಿಗೋಪುರ ಕಟ್ಟಿ ಜನರ ಕಣ್ಣಿಗೆ ಮಣ್ಣೆರಚುವುದನ್ನು ಸಾಕು ಮಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಮಂಗಳೂರಿಗೆ 32,611 ಕೋಟಿ ರೂ. ಬೃಹತ್ ಯೋಜನೆಗಳ ಗಿಫ್ಟ್ ನೀಡಿದ್ದೇವೆ ಎಂದು ಅಂಗೈಯಲ್ಲೇ ಅರಮನೆ ತೋರಿಸಿ ಮಂಗಳೂರಿನ ಜನತೆಯ ಮೂಗಿಗೆ ತುಪ್ಪ ಸವರುತ್ತಿದ್ದೀರಿ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಆದರೆ ಮೊದಲಿಗೆ ಈ ಸುಳ್ಳು ಘೋಷಣೆಗಳಿಗೆ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಹೇಳಿ ಇದಕ್ಕೆಲ್ಲ ಹಣ ಎಲ್ಲಿಂದ ತರುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.

ಸಾರಿಗೆ ನಿಗಮಗಳಿಗೆ 5,000 ಬಾಕಿ ಕೊಡಲು ದುಡ್ಡಿಲ್ಲ; ಬಸ್ಸುಗಳಿಗೆ ಡೀಸೆಲ್ ಹಾಕಿಸಲು, ಸ್ಪೇರ್ ಪಾರ್ಟ್ಸ್ ಕೊಳ್ಳಲು ಹಣವಿಲ್ಲ!
ಎಸ್ಕಾಂಗಳಿಗೆ ಬಾಕಿ ತೀರಿಸಲು ದುಡ್ಡಿಲ್ಲ.
ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ದುಡ್ಡಿಲ್ಲ; ಕುಸಿಯುತ್ತಿರುವ ಶಾಲಾ ಕೊಠಡಿಗಳ ರಿಪೇರಿಗೂ ಹಣವಿಲ್ಲ.
NHM, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಆಂಬುಲೆನ್ಸ್ ಚಾಲಕರು ಯಾರಿಗೂ ನೆಟ್ಟಗೆ ಸಂಬಳ ಕೊಡಲು ದುಡ್ಡಿಲ್ಲ.
ಹೈನುಗಾರರ ಪ್ರೋತ್ಸಾಹಧನದ ಬಾಕಿ ಹಾಗೂ ರೈತರ ಬರ ಪರಿಹಾರಕ್ಕೂ ದುಡ್ಡಿಲ್ಲ.
ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಕುಲಪತಿಗಳ ನೇಮಕಾತಿಗೂ ಹಣವಿಲ್ಲ.

ಇಷ್ಟೆಲ್ಲಾ ಮೂಲಭೂತ ಕಾರ್ಯಗಳಿಗೆ ಹಣವಿಲ್ಲದೆ ಸಂಪೂರ್ಣ ದಿವಾಳಿಯಾಗಿರುವ ನಿಮ್ಮ ಪಾಪರ್ ಸರ್ಕಾರಕ್ಕೆ, ಈಗ ಮಂಗಳೂರಿಗೆ 32,611 ಕೋಟಿ ಕೊಡುವ ಯೋಗ್ಯತೆ ಎಲ್ಲಿದೆ ಮುಖ್ಯಮಂತ್ರಿಗಳೇ ಉತ್ತರ ಕೊಡಿ ಎಂದು ಅಶೋಕ್‌ ಆಗ್ರಹಿಸಿದ್ದಾರೆ.

ನಿಮ್ಮ ಈ ಸುಳ್ಳು, ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗುವಷ್ಟು ದಡ್ಡರಲ್ಲ ನಮ್ಮ ಕರಾವಳಿಯ ಪ್ರಬುದ್ಧ ಜನತೆ.
ಗಾಳಿಯಲ್ಲೇ ಗೋಪುರ ನಿರ್ಮಿಸುವ, ಅಂಗೈಯಲ್ಲಿ ಅರಮನೆ ತೋರಿಸುವ ನಾಟಕ ಬಿಟ್ಟು, ಮೊದಲು ನೆಟ್ಟಗೆ ಆಡಳಿತ ನಡೆಸುವುದನ್ನು ಕಲಿಯಿರಿ ಎಂದು ಸಲಹೆ ನೀಡಿ ಚಾಟಿ ಬೀಸಿದ್ದಾರೆ.