ಬೆಂಗಳೂರು: ಬಾಗಿಲಿಗೆ ಬಂತು ಸರ್ಕಾರ ಎಂಬುದು ಬರಿ ಪೋಸ್ಟರ್‌ಗಳಿಗೆ ಸೀಮಿತವೇ ಸಿಎಂ ಡಿ.ಕೆ.ಶಿ ಅವರೇ,ಪ್ರಜಾಸೇವಾ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಗೈರು, ಶಾಸಕರಿಗೂ ಕಾಳಜಿಯಿಲ್ಲ, ಅಧಿಕಾರಿಗಳಿಗೂ ಜವಾಬ್ದಾರಿಯಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ನಿಮ್ಮ ಪೊಳ್ಳು ಘೋಷಣೆಗಳೆಲ್ಲ ಬರೀ ಸುಳ್ಳು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಅಶೋಕ್ ಟ್ವೀಟ್ ಮಾಡಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಲಂಚ ಕೊಡಬೇಕು ಎಂದು ಸ್ವತಃ ನಿಮ್ಮ ಸರ್ಕಾರದ ಸಚಿವರೇ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಇಟ್ಟಿದ್ದಾರೆ. ಇತ್ತ ಸಾರ್ವಜನಿಕರ ಕುಂದುಕೊರತೆ ಕೇಳಲು ಆಯೋಜಿಸಿದ ಸಭೆಗಳಲ್ಲಿ ಸಚಿವರೇ ಇರುವುದಿಲ್ಲ. ಜನರ ದೂರು-ದುಮ್ಮಾನಗಳನ್ನು ಆಲಿಸದ ಈ ಸರ್ಕಾರಕ್ಕೆ ‘ಪ್ರಜಾಸೇವೆ’ ಎಂದು ಹೇಳಿಕೊಳ್ಳಲು ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ್ದಾರೆ.
ಜನರ ಕಣ್ಣಿಗೆ ಮಣ್ಣೆರಚುವ ಇಂತಹ ಗಿಮಿಕ್‌ಗಳನ್ನು ಬಿಟ್ಟು, ಮೊದಲು ಆಡಳಿತದಲ್ಲಿ ಪಾರದರ್ಶಕತೆ ತನ್ನಿ. ಜನಸಾಮಾನ್ಯರ ಆಕ್ರೋಶದ ಬಿಸಿ ಶೀಘ್ರದಲ್ಲೇ ಈ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ ಎಂದು ಅಶೋಕ ಎಚ್ಚರಿಸಿದ್ದಾರೆ.

