ಬೆಂಗಳೂರು: ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಾಗಿದ್ದು ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಮಂಗಳವಾರ ನಡೆದ ಕಿಯೋನಿಕ್ಸ್ 50ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮಗಳೊಂದಿಗೆ ಸಿಎಂ ಮಾತನಾಡಿದರು.
ಕೆಪಿಎಸ್ ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ ಎಂದು ತಿಳಿಸಿದರು.
ಹೈಕೋರ್ಟ್ ಎಸ್ ಐ ಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇ ಡಿ ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು ಎಂದು ಸಿಎಂ ಅಭಿಪ್ರಾಯ ಪಟ್ಟರು.
ನ್ಯಾಯಾಲಯ ಎಸ್ ಐಟಿ ತನಿಖೆಗೆ ನಿರ್ದೇಶಿಸಿರುವುದು ಜಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ ಎಂದು ಹೇಳಿದರು.
ನಮಗೆ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಕೆಪಿಎಸ್ ಸಿಯಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ನಂಬಿಕೆ ಇಟ್ಟು, ಪಾರದರ್ಶಕವಾಗಿ ಆಯ್ಕೆ ಮಾಡಿ ಅಧಿಕಾರಿಗಳನ್ನು ಕಳುಹಿಸಿದರೆ ಅವರೂ ಹೀಗೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಇಂಧನ ಸಚಿವನಾಗಿದ್ದಾಗ 22 ಸಾವಿರ ಮಂದಿ ಲೈನ್ ಮ್ಯಾನ್, ಎಂಜಿನಿಯರ್ ಗಳ ಹುದ್ದೆ ತುಂಬಿದ್ದೇನೆ. ಬಹಳ ಜಾಗೃತನಾಗಿ ಈ ಕೆಲಸ ಮಾಡಿದ್ದೇನೆ. ಅದಕ್ಕೂ ಮೊದಲು ಖಾಲಿ ಪೇಪರ್ ನಲ್ಲಿ ಬರೆಸುವ ಭ್ರಷ್ಟ ಸಂಪ್ರದಾಯ ಇತ್ತು. ಆದರೆ ನಾನು ಅದಕ್ಕೆಲ್ಲಾ ಅವಕಾಶ ಕೊಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಎಚ್ ಕೆ ಪಾಟೀಲರು ಗದಗವನ್ನು ಬರದ ಜಿಲ್ಲೆ ಎಂದು ಘೋಷಣೆ ಮಾಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ನನ್ನ ಜೊತೆ ಪಾಟೀಲರು ಇದ್ದರು. ಅವರು ಹೇಳಿದ್ದು ಸತ್ಯ. ಮಲೆನಾಡಿನಲ್ಲೇ ಬರ ಬಂದಿದೆ ಎಂದರೆ, ಗದಗದಲ್ಲಿ ಬರ ಇರುವುದಿಲ್ಲವೇ, ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಈಗಾಗಲೇ 124 ತಾಲೂಕುಗಳು ಬರ ಘೋಷಣೆಯಾಗಿದೆ. 200 ತಾಲೂಕು ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಗತ್ಯ ವರದಿಗಳು ಬರುತ್ತಿವೆ ಎಂದು ಉತ್ತರಿಸಿದರು.
ನಾನು ರೈತರು, ಜನರ ಜೊತೆ ಮಾತನಾಡಿದ್ದೇನೆ. ಪ್ರವಾಸ ಮಾಡಿದ್ದೇನೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಆಗ ಸಮಯ ವ್ಯರ್ಥ ಮಾಡಿ ಈಗ ಹೆಚ್ಚಿಗೆ ಸಮಯ ಬೇಕು ಅಂದರೆ ಹೇಗೆ, ವಿರೋಧ ಪಕ್ಷಗಳಿಗೆ ರಾಜಕೀಯ ಮುಖ್ಯ. ನಮಗೆ ಅಭಿವೃದ್ಧಿ ಮುಖ್ಯ, ರೈತರ ಸಮಸ್ಯೆ ಮುಖ್ಯ. ಜನರ ಹಸಿವು ನೀಗಿಸುವುದು ಮುಖ್ಯ ಎಂದು ಹೇಳಿದರು.
ಸೌಜನ್ಯ ಪ್ರಕರಣ ಮರುತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತೇನೆ, ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದರು.

