ಸಕಲೇಶಪುರ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ನಿಲುವು ತಿಳಿಸುವ ಮುನ್ನ ರೈತರು, ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವವರು ಹಾಗೂ ಸ್ಥಳೀಯ ಜನರ ಅಭಿಪ್ರಾಯವನ್ನು ನೇರವಾಗಿ ಪಡೆಯುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾನುವಾರ ಸಕಲೇಶಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ತಿರಸ್ಕರಿಸಿತ್ತು. ಆದರೆ ಕೇಂದ್ರ ಸರ್ಕಾರ ಮತ್ತೆ ರಾಜ್ಯದ ಅಭಿಪ್ರಾಯ ಸೆ.27ರೊಳಗೆ ತಿಳಿಸುವಂತೆ ಸೂಚಿಸಿದೆ.ಹಾಗಾಗಿ ಈ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ವಿರೋಧಪಕ್ಷದವರಿಗೆ ರಾಜಕಾರಣ ಮುಖ್ಯವಾಗಿರಬಹುದು ಆದರೆ ನಮಗೆ ಜನರ ಬದುಕು ಮುಖ್ಯ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ವರದಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಮತ್ತೆ ಈ ವಿಚಾರವನ್ನು ರಾಜ್ಯಕ್ಕೆ ಕಳುಹಿಸಿರುವ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ವರದಿಯಿಂದ ಉಂಟಾಗಬಹುದಾದ ಪರಿಣಾಮಗಳು, ಜನರ ಬದುಕಿನ ಮೇಲೆ ಬೀರುವ ಪರಿಣಾಮ, ರೈತರ ಸಮಸ್ಯೆಗಳು ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ,ಅಲ್ಲದೆ
ಕಸ್ತೂರಿ ರಂಗನ್ ವರದಿ ಸೇರಿದಂತೆ ಜನರಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಿಗೆ ವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು ಹೇಳಿದರು.
ಜನರ ಭಾವನೆ ಏನು, ರೈತರ ಭಾವನೆ ಏನು, ಅರಣ್ಯದ ಪಕ್ಕದಲ್ಲಿ ವಾಸಿಸುವ ಜನರ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಂಡು, ನಂತರ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಇದೀಗ ಹಾಸನ ಜಿಲ್ಲೆಯ ಸಕಲೇಶಪುರ ಭಾಗಕ್ಕೆ ಭೇಟಿ ನೀಡಲಾಗಿದೆ. ಮುಂದಿನ ಹಂತದಲ್ಲಿ ಸಂಬಂಧಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ಆಲಿಸಿ ಪರಿಗಣಿಸಲಾಗುವುದು ಎಂದು ಹೇಳಿದರು.
ವಿಶೇಷ ಅಧಿವೇಶನದಲ್ಲಿ ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ರೈತರಿಗೆ ಸಂಬಂಧಿಸಿದ ವಿಚಾರಗಳ ಕುರಿತು ಸದನದಲ್ಲಿ ಈಗಾಗಲೇ ಅಗತ್ಯ ಅವಕಾಶಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪ್ರಜಾಸೇವೆ ಮೂಲಕ ಸರ್ಕಾರಕ್ಕೂ ಜನರಿಗೂ ಮಧ್ಯೆ ಇರುವ ಗೋಡೆಯನ್ನು ಒಡೆಯಬೇಕು. ಎಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೋ ಅಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಪ್ರತಿ ಶನಿವಾರ ಸಚಿವರು ಹಾಗೂ ಶಾಸಕರು ಕಡ್ಡಾಯವಾಗಿ ಜನರ ಮಧ್ಯೆ ತೆರಳಿ ಅಹವಾಲು ಸ್ವೀಕರಿಸುವಂತೆ ಸೂಚಿಸಲಾಗಿದೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸಹಕಾರ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ.ಇದೇ ಉದ್ದೇಶದಿಂದ ‘ಪ್ರಜಾಸೇವಾ’ ವ್ಯವಸ್ಥೆಯನ್ನೂ ಆರಂಭಿಸಲಾಗಿದ್ದು, ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮನ್ನು ‘ಟೂರಿಂಗ್ ಟಾಕೀಸ್’ ಎಂದು ಟೀಕಿಸಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜಕಾರಣದಲ್ಲಿ ಟೀಕೆಗಳು ಸಹಜ. ಅದನ್ನು ಸ್ಫೂರ್ತಿಯಿಂದ ಸ್ವೀಕರಿಸುತ್ತೇನೆ ಎಂದು ಸಿಎಂ ಉತ್ತರಿಸಿದರು.

