ಮೈಸೂರು, ಅ.9:ಮೈಸೂರು ಅರಮನೆಯ ಆಡಳಿತ ಮಂಡಳಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆ ಒಳಗೆ ಪಾಳೇಗಾರರು ಸೇರಿಕೊಂಡು ದರ್ಬಾರ್ ಮಾಡುತ್ತಿದ್ದಾರೆ. ಅರಮನೆಯ ಪಾರಂಪರಿಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ವಹಣಾ ಮಂಡಳಿ ರಚಿಸಿ ಅರಮನೆಯನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಮರದ ಅರಮನೆ ಸುಟ್ಟು ಹೋದ ಬಳಿಕ ಮಹಾರಾಜರು ಎಷ್ಟು ಕಷ್ಟಪಟ್ಟು ಈ ಅರಮನೆಯನ್ನು ಕಟ್ಟಿದ್ದಾರೆ. ನಮಗೆ ಮತ್ತೊಮ್ಮೆ ಅರಮನೆ ಕಟ್ಟುವ ಯೋಗ್ಯತೆ ಇದೆಯಾ? ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿದರೆ ಅರಮನೆ ಉಳಿಯುತ್ತದೆಯೇ? ಅರಮನೆ ವೀಕ್ಷಕರ ಪ್ರವೇಶವನ್ನು ರದ್ದು ಮಾಡಿ, ದಿನಕ್ಕೆ ಇಷ್ಟೇ ಜನ, ಇಷ್ಟೇ ಸಮಯ ಎಂದು ನಿಗದಿ ಮಾಡಬೇಕು ಎಂದು ಅವರು ಹೇಳಿದರು.
ಅರಮನೆಯನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸುವುದಾಗಿ ರಘು ಕೌಟಿಲ್ಯ ಎಚ್ಚರಿಕೆ ನೀಡಿದರು.

