ಮೈಸೂರು:ಕತ್ತಲೆ ಆಗಸದಲ್ಲಿ ಮಿನುಗಿದ ಸಾವಿರಾರು ಬೆಳಕಿನ ಚುಕ್ಕಿಗಳು… ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಬಣ್ಣಬಣ್ಣದ ಆಕೃತಿಗಳು… ಬಾನಂಗಳದಲ್ಲೇ ಜೀವತಳೆದ ನವಿಲು, ಸಿಂಹ, ಚಾಮುಂಡೇಶ್ವರಿ ಹಾಗೂ ಚಿನ್ನದ ಅಂಬಾರಿಯ ಮನಮೋಹಕ ದೃಶ್ಯಗಳು…! ಹೀಗೆ 3,500 ಡ್ರೋನ್ಗಳು ಸೃಷ್ಟಿಸಿದ ಬೆಳಕಿನ ಮಾಯಾಲೋಕ ಮೈಸೂರು ದಸರಾ ವೈಭವಕ್ಕೆ ಹೊಸ ಮೆರುಗು ನೀಡಿತು.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಂಗಮಕ್ಕೆ ಸಾಕ್ಷಿಯಾಯಿತು. ಬಾನಂಗಳಕ್ಕೆ ಏಕ ಕಾಲಕ್ಕೆ ಹಾರಿದ 3500 ಡ್ರೋನ್ಗಳು ಬಣ್ಣಬಣ್ಣದ ಎಲ್ಇಡಿ ದೀಪಗಳ ಬೆಳಕಿನಿಂದ 12 ವಿಭಿನ್ನ ವಿನ್ಯಾಸಗಳ ಚಿತ್ತಾರಗಳನ್ನು ಆಗಸದಲ್ಲಿ ಬಿಡಿಸಿ, ಇಡೀ ಮೈದಾನದಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ದಸರೆಯ ಸಾಂಸ್ಕೃತಿಕ ವೈಭವಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ಪ್ರದರ್ಶನವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಸ್ತ ಜನತೆಗೆ ದಸರಾ ಮಹೋತ್ಸವಕ್ಕೆ ಸ್ವಾಗತ ಕೋರುವ ವಿನ್ಯಾಸದೊಂದಿಗೆ ಈ ಬಾರಿಯ ಡ್ರೋನ್ ಶೋ ಆರಂಭಗೊಂಡಿತು. ನಂತರ ಒಂದರ ಹಿಂದೆ ಒಂದರಂತೆ ಆಕಾಶದಲ್ಲಿ ಮೂಡಿಬಂದ ಬೆಳಕಿನ ವಿನ್ಯಾಸಗಳು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದವು.
ಈ ಬಾರಿಯ ಪ್ರದರ್ಶನದಲ್ಲಿ ಗ್ಯಾಲಕ್ಸಿ, ದೇಶದ ಹೆಮ್ಮೆಯ ಸೈನಿಕ, ಆಕರ್ಷಕ ಚಿಟ್ಟೆ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಕಾಡಿನ ರಾಜ ಸಿಂಹದ ವಿನ್ಯಾಸಗಳು ಗಮನ ಸೆಳೆದವು. ಅದರಲ್ಲೂ ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸದ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಸೆಸ್ಕ್ನ ಪ್ರಯತ್ನ ವಿಶೇಷ ಕುತೂಹಲ ಮೂಡಿಸಿತು. ಇವುಗಳೊಂದಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಧಾರ್ಮಿಕ ಭಾವನೆ ಮೂಡಿಸಿದ ಸುದರ್ಶನ ಚಕ್ರ ಹಾಗೂ ಶಿವತಾಂಡವದ ದೃಶ್ಯಾವಳಿಗಳು ಪ್ರೇಕ್ಷಕರ ಮೈನವಿರೇಳಿಸಿದರೆ. ಮೈಸೂರಿನ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಪರಂಪರೆ ಪ್ರತಿಬಿಂಬಿಸುವ ನಂದಿ ವಿಗ್ರಹ, ವಿಶ್ವವಿಖ್ಯಾತ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಮತ್ತು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವಿನ್ಯಾಸಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದವು.
ಸಾಂಸ್ಕೃತಿಕ ಕಾರ್ಯಕ್ರಮ:
ಡ್ರೋನ್ ಪ್ರದರ್ಶನಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಖ್ಯಾತ ಗಾಯಕರಾದ ಇಂಧೂ ನಾಗರಾಜ್, ಶ್ರೀಹರ್ಷ, ವ್ಯಾಸರಾಜ್, ದಿವ್ಯ ರಾಮಚಂದ್ರ ಹಾಗೂ ಐಶ್ವರ್ಯ ರಂಗರಾಜನ್ ಅವರುಗಳು ತಮ್ಮ ಸುಮಧುರ ಕಂಠದ ಮೂಲಕ ಹಲವು ಗೀತೆಗಳನ್ನು ಪ್ರಸ್ತುಪಡಿಸುವ ಮೂಲಕ ಪ್ರೇಕ್ಷಕರಿಗೆ ಮುದನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಡ್ರೋನ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಶಾಸಕ ತನ್ವೀರ್ ಸೇಠ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ನಟಿ ಅನುಷಾ ರೈ,
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನ, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೋಸಲೆ ಲಿಂಗಯ್ಯ, ಉಪಾಧ್ಯಕ್ಷರಾದ ಗುಣಶೇಖರ್, ಮೋಸಿನ್ ಖಾನ್, ಷಾಹಿನ್ ಷಾ ಅಹಮದ್, ಕೆ.ಎಸ್. ರವಿ ಸೇರಿದಂತೆ ಹಲವು ಗಣ್ಯರು ಇದ್ದರು.
ಬಾಕ್ಸ್
ಮತ್ತೊಂದು ಗಿನ್ನಿಸ್ ದಾಖಲೆ ಪ್ರಯತ್ನ
ಈ ಬಾರಿಯ ಡ್ರೋನ್ ಶೋನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಮತ್ತೊಂದು ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನ ನಡೆಸಲಾಯಿತು. ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸಕ್ಕೆ ಗಿನ್ನಿಸ್ ದಾಖಲೆಯ ಹೆಗ್ಗಳಿಕೆ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಒಟ್ಟಾರೆ ಈ ಬಾರಿಯ ಮೈಸೂರು ದಸರೆಯ ಸಾಂಪ್ರದಾಯಿಕ ವೈಭವವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಸೆದ ಡ್ರೋನ್ ಪ್ರದರ್ಶನವು ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಹೊರಹೊಮ್ಮಿತು.

