ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿರುವ ಕರಾವಳಿಯ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ದಸರಾ ಕಂಬಳ ಕೋಣಗಳ ಓಟದ ಸ್ಪರ್ಧೆಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು.
ನಗರದ ಸಾತಗಳ್ಳಿ ವಿಟಿಯು ಕಾಲೇಜು ಸಮೀಪದ ವಿಶಾಲ ಆವರಣದಲ್ಲಿ ದಸರಾ ಕಂಬಳ ಉಪಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ದಸರಾ ಕಂಬಳಕ್ಕೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿದರು. ಕಂಬಳದಲ್ಲಿ ಒಟ್ಟು 150 ಜೋಡಿ ಕೋಣಗಳು ಭಾಗವಹಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಕಂಬಳ ಕರಾವಳಿ ಪ್ರದೇಶದ ಗ್ರಾಮೀಣ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಆ ಭಾಗದ ಕ್ರೀಡೆ ಆ ಭಾಗಕ್ಕೆ ಮಾತ್ರ ಸೀಮಿತವಾಗಬಾರದು. ವಿಶ್ವವಿಖ್ಯಾತ ಮೈಸೂರು ದಸರಾ ಮೂಲಕ ಕಂಬಳ ಪ್ರಸಿದ್ಧಿ ಹೆಚ್ಚಬೇಕು, ಎಲ್ಲೆಡೆ ಜನರು ನೋಡುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಿದ ಎಲ್ಕರಿಗೂ ಹಾಗೂ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಲು ಸಹಕಾರ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲುಸುತ್ತೇನೆ ಎಂದು ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ತುಳುನಾಡಿನ ಕಂಬಳ ಪ್ರಥಮ ಬಾರಿಗೆ ನಡೆಯುತ್ತಿದೆ. ತುಳುನಾಡಿನಿಂದ ಆಗಮಿಸಿರುವ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಂಗಸ್ವಾಮಿ, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಕಂಬಳವನ್ನು ಸಾರ್ವಜನಿಕರು ಕುಟುಂಬ ಸಮೇತ ಬಂದು ವೀಕ್ಷಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

