ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ, ಜೆ.ಡಿ.ಎಸ್ ಅಧಿಕಾರಕ್ಕೆ ಬರಲ್ಲ -ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು: ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ; ಜೆ.ಡಿ.ಎಸ್ ಅಧಿಕಾರಕ್ಕೆ ಬರಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಈಶ್ವರಪ್ಪನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
2023ಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ಸಿಎಂ ಆಗುತ್ತೇನೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೆಲವರು ಹಗಲು ಕನಸು ಕಾಣುತ್ತಿರುತ್ತಾರೆ. ಅದೇ ರೀತಿ ಕುಮಾರಸ್ವಾಮಿ, ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಆಗುತ್ತೇನೆ ಅಂತಿದ್ದಾರೆ. ಅವರ ಪಕ್ಷದವರು ಯಾರಾದರು ಹೇಳಿದ್ದಾರಾ? ಎಂದು ಈರ್ಶವರಪ್ಪ ಪ್ರಶ್ನಿಸಿ, ಕುಮಾರಸ್ವಾಮಿ ಅವರು ಕೂಡ ಅದೇ ರೀತಿ ಮಾತನಾಡುತ್ತಿದ್ದಾರೆ. ಇವರಿಬ್ಬರದು ಹಗಲು ಕನಸು. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಜೆ.ಡಿ.ಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಅಂತ ಸುಮ್ಮನೆ ಮಾತನಾಡುತ್ತಾರೆ. ಇದು ಕೇವಲ ಸೃಷ್ಟಿ ಮಾಡಿರುವುದು ಅಷ್ಟೇ. ಕೇಂದ್ರ ನಾಯಕರು, ಶಾಸಕರು ಯಾರೂ ಹೇಳಿಲ್ಲ. ಇದನ್ನ ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೇ ಎಂದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಅದರ ಮೇಲೆ ಕಣ್ಣು. ಹಾಗಾಗಿ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ಹೇಳಿ ಅಭ್ಯಾಸ ಆಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಈಶ್ವರಪ್ಪ ಹೇಳಿದರು.
ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಅವರನ್ನು ಮಂತ್ರಿ ಮಾಡುವುದು ಬಿಡುವುದು ಮುಖ್ಯಮಂತ್ರಿ ಗಳಿಗೆ ಬಿಟ್ಟಿದ್ದು. ಒಂದು ವೇಳೆ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿಯವರು ಮಂತ್ರಿ ಮಾಡುತ್ತೇವೆ ಅಂದರೆ ಅದನ್ನು ಅವರು ಒಪ್ಪಿಕೊಳ್ಳಬೇಕು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲವು ಬಾರಿ ಅವರು ಬಹಿರಂಗವಾಗಿ ಏನೇನೋ ಟೀಕೆ ಮಾಡಿಬಿಡುತ್ತಾರೆ. ಇದು ತಪ್ಪು ಇದರ ಬಗ್ಗೆ ನಾವು ಹೇಳಿದ್ದೇವೆ ಎಂದರು.
ಯುವರಾಜ್ ಎಂಬಾತನ ಮುಖವನ್ನು ನಾನು ಜೀವಂತವಾಗಿ ಆತನ ಮುಖ ನೋಡಿಲ್ಲ. ಬಹಳ ಬುದ್ದಿವಂತಿಕೆಯಿಂದ ಅನೇಕರಿಗೆ ಮೋಸ ಮಾಡಿದ್ದಾನೆ. ಆದರೆ ದಿನೇಶ್ ಗುಂಡೂರಾವ್ ಬಿಜೆಪಿಯವರ ಭೇಟಿಯಾಗಿದ್ದಾನೆ ಈ ಬಗ್ಗೆ ತನಿಖೆಯಾಗಬೇಕು ಅಂತ ಹೇಳುತ್ತಾರೆ. ಹಾಗಾದರೆ ವೇಣುಗೋಪಾಲ್ ಭೇಟಿ ಬಗ್ಗೆ ತನಿಖೆಯಾಗೋದು ಬೇಡ್ವ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.
ಎಲ್ಲವನ್ನು ರಾಜಕೀಯವಾಗಿ ನೋಡಬಾರದು. ಪಕ್ಷಾತೀತಿವಾಗಿ ನೋಡಬೇಕು ಎಂದು ಈಶ್ವರಪ್ಪ ದಿನೇಶ್ ಗುಂಡುರಾವ್ ಅವರಿಗೆ ಕಿವಿಮಾತು ಹೇಳಿದರು.