ಹುಬ್ಬಳ್ಳಿ: ರೈತ ಪರ ಹೋರಾಟಕ್ಕೆ ಜ. 20ರಂದು ರಾಜಭವನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಸಂಕಲ್ಪ ಸಮಾವೇಶಕ್ಕೆ ಡಿಕೆಶಿ ಚಾಲನೆ ನೀಡಿ ಮಾತನಾಡಿದರು.
ಸಂಕ್ರಮಣ ಕಾರಣಕ್ಕೆ ಜ. 14ರಂದು ನಡೆಯಬೇಕಿದ್ದ ಹೋರಾಟವನ್ನು ಜ. 20ಕ್ಕೆ ಮುಂದೂಡಲಾಗಿದೆ. ಅಂದಿನ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರನ್ನು ಸಂಘಟಿಸಬೇಕಾಗಿದೆ ಎಂದು ತಿಳಿಸಿದರು.
ರೈತ ಪರ ಹೋರಾಟದಲ್ಲಿ ಪ್ರತಿಯೊಂದು ಬ್ಲಾಕ್‍ಗಳಿಂದ ಐದೈದು ಬಸ್‍ಗಳಲ್ಲಿ ಜನರನ್ನು ಕರೆ ತರಬೇಕು ಎಂದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ಪ್ರತಿಭಟನೆ ಆರಂಭಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದವರು ತಿಳಿಸಿದರು.
ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು, ವಿನ: ಸಭೆ ನಡೆಸಿ ಭಾಷಣ ಹೊಡೆದರೆ ಪಕ್ಷ ಸಂಘಟನೆಯಾಗದು ಎಂದು ಡಿಕೆಶಿ ಹೇಳಿದರು.
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ಬೇಡ. ಈಗಿನಿಂದಲೇ ಚುನಾವಣೆಗೆ ಸಿದ್ಧರಾಗಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಾಲಿಕೆ ಚುನಾವಣೆಗಳಿಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.
ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಯೋಜನೆ ರೂಪಿಸಿದ್ದೇನೆ. ನಾವು ಹಾಕಿಕೊಟ್ಟ ಬುನಾದಿಯಂತೆ ಶಿಸ್ತಿನಿಂದ ಪಕ್ಷವನ್ನು ಮುನ್ನಡೆಸಬೇಕು. ಯಾರೂ ಎಷ್ಟೇ ದೊಡ್ಡ ನಾಯಕನಾಗಿದ್ದರೂ, ಪಕ್ಷದ ಶಿಸ್ತು ಉಲ್ಲಂಘಿಸುವಂತಿಲ್ಲ. ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಪೂಜೆ ಮಾಡುವಂತೆ ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಾವೇಶ, ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಕಾರ್ಯಕರ್ತರಿಗೆ ತಿಳಿಸಿದರು.
ಜ. 20ರಂದು ರಾಜಭವನಕ್ಕೆ ಮುತ್ತಿಗೆ -ಡಿಕೆಶಿ

