ಮೈಸೂರು: ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕುರುಬ ಎಸ್ ಟಿಗೆ ಸೇರಿಸುವ ವಿಚಾರ, ಸ್ವಾಮೀಜಿ ಪಾದಯಾತ್ರೆಗೆ ಆರ್.ಎಸ್.ಎಸ್. ಫಂಡ್ ಆರೋಪ ವಿಚಾರಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿ, ಸ್ವಾಮೀಜಿ ಸಾಕಷ್ಟು ಬೇಸರಗೊಂಡಿದ್ದಾರೆ. ಸ್ವಾಮಿಗಳು ಈ ಮಾತಿನಿಂದ ಕುಗ್ಗಿ ಹೋಗಿದ್ದಾರೆ ಎಂದರು.
ಸ್ವಾಮೀಜಿ ವಿರುದ್ಧದ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು. ಇಲ್ಲವಾದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ನಿಮಗೆ ಮಠನೂ ಗೊತ್ತಿಲ್ಲ ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ. ಇದು ನಿಮಗೆ ಗೌರವ ತರುತ್ತಾ ಎಂದು ವಿಶ್ವನಾಥ್ ಪ್ರಶ್ನಿಸಿದರು.
ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ ಎಂದರು.
ಸಿದ್ದರಾಮಯ್ಯ ಮರೆತಿದ್ದಾರೆ ಮಠದಿಂದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು. ನಮ್ಮ ಬಗ್ಗೆ ನೀವು ಹೇಳಿ ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ ಎಂದರು.
ಉತ್ತರ ಕರ್ನಾಟಕದ ಕುರುಬರ ಕಷ್ಟ ಬಿಳಿ ಬಟ್ಟೆ ಹಾಕೀರೋ ಸಿದ್ದರಾಮಯ್ಯ ಗೆ ಅರ್ಥ ಆಗಲ್ಲ. ನೀವು ಮುಖ್ಯಮಂತ್ರಿ ಆಗಬೇಕಾದರೆ ನಮ್ಮ ಸಮಾಜ ಕಾರಣ. ನಿಮಗೆ ಇಷ್ಟ ಇದ್ದರೆ ಹೋರಾಟಕ್ಕೆ ಬನ್ನಿ. ಜನರನ್ನ ದಿಕ್ಕು ತಪ್ಪಿಸಬೇಡಿ. ನಿಮಗೆ ಸಮುದಾಯದ ಋಣ ಇದೆ. ಅದರಂತೆ ನಡೆದುಕೊಳ್ಳಿ ಎಂದು ವಿಶ್ವನಾಥ್ ಕಿವಿಮಾತು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಆಗಿರುವುದು ಸಿಎಂ ಪರಮಾಧಿಕಾರದಿಂದ. ಸಿಎಂಗೆ ಸಂಪುಟ ರಚಿಸುವ ವಿಸ್ತರಿಸುವ ಅಧಿಕಾರ ಇದೆ. ಇದರಲ್ಲಿ ಹೈ ಕಮಾಂಡ್ ಪಾತ್ರ ಏನು ಇಲ್ಲ. ಯಡಿಯೂರಪ್ಪ ಸುಮ್ಮನೇ ಹೈಕಮಾಂಡ್ ಅಂತ ತೋರಿಸುತ್ತಿದ್ದಾರೆ ಎಂದರು.
ಯೋಗೇಶ್ವರ್ ಮೇಲೆ ಎಷ್ಟು ಕೇಸ್ ಇದೆ ಅನ್ನೋದು ಹೈ ಕಮಾಂಡ್ ಗೆ ಏನು ಗೊತ್ತಿದೆ. ಹೈಕಮಾಂಡ್ ಗೆ ರಾಜ್ಯದ ವಿಚಾರ ಏನು ಗೊತ್ತಿಲ್ಲ ಎಂದರು.
ಯೋಗೇಶ್ವರ್ ಗೆ ಮೈಸೂರು ಉಸ್ತುವಾರಿ ನೀಡೋ ವಿಚಾರಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿ ಮೈಸೂರು ಏಕೆ ಇಡೀ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ. ಮೈಸೂರಿಗೂ ಬಂದು ಇಲ್ಲೂ ಮೆಗಾಸಿಟಿ ಮಾಡಿ ಇಲ್ಲಿನ ಒಂದಷ್ಟು ಜನರಿಗೆ ಟೋಪಿ ಹಾಕಲಿ ಎಂದು ವ್ಯಂಗ್ಯವಾಡಿದರು.
ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ: ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ವಿಶ್ವನಾಥ್

