ಹುಬ್ಬಳ್ಳಿ: ಯಾರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅಕ್ರಮ ಗಣಿಗಾರಿಕೆ ಮತ್ತು ಅಧಿಕಾರಿಗಳ ನಡುವೆ ಅಕ್ರಮ ಸಂಬಂಧ ನಡೆದಿದೆ. ಹೀಗಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ. ಕೇವಲ ಅಲ್ಲಿರುವ ಅಧಿಕಾರಿಗಳ ಮೇಲೆ ಮಾತ್ರವಲ್ಲ. ರಾಜ್ಯದಲ್ಲಿ ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಅವರು ಕೇಂದ್ರ ಸಚಿವರು ಹೇಳಿದರು.
ಶಿವಮೊಗ್ಗದಲ್ಲಿ ನೆಡೆದ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಾದ್ಯಂತ ಎಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅದರ ಬಗ್ಗೆ ಗಂಭೀರ ತನಿಖೆಯನ್ನು ರಾಜ್ಯ ಸರ್ಕಾರ ಮಾಡಬೇಕು ಎಂದರು.
ಶಿವಮೊಗ್ಗ ಘಟನೆ ಅತ್ಯಂತ ಘೋರವಾದದ್ದು, ಅಷ್ಟೊಂದು ಪ್ರಮಾಣದ ಸ್ಫೋಟಕ ವಸ್ತುಗಳನ್ನು ಶೇಖರಣೆ ಮಾಡಿದ್ದು ಯಾಕೆ?
ಅದು ಪರವಾನಗಿ ಇದೆಯೇ? ಇದೆಲ್ಲದರ ಬಗ್ಗೆ ತನಿಖೆ ಮಾಡಲು ಗಣಿ ಸಚಿವರಿಗೆ ಸೂಚಿಸಿದ್ದೇನೆ. ಸಚಿವ ಮುರಗೇಶ ನಿರಾಣಿಯವರ ಜೊತೆ ಮಾತನಾಡಿದ್ದೇನೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವರು ಇದು ಭಾರತ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ನಮಗೆ ಮೇಜರ್ ಮಿನರಲ್ಸ್ ಬರುತ್ತದೆ ಎಂದು ತಿಳಿಸಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆಂದರು.
ಬಳ್ಳಾರಿ ಜಿಲ್ಲೆಯಲ್ಲಿ ಜೆಲಿಟಿನ್ ಕಡ್ಡಿ ವಶ ಪಡೆದ ವಿಚಾರ ಕುರಿತು ಜೋಶಿ ಅವರು ಉತ್ತರಿಸಿ, ಶಿವಮೊಗ್ಗ ಘಟನೆ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು ಎಂದರು.
ಅಕ್ರಮ ಗಣಿಗಾರಿಕೆ: ಕ್ರಿಮಿನಲ್ ಕೇಸ್ ಹಾಕಬೇಕು -ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

