ಬೆಂಗಳೂರು: ಕರಾವಳಿ ಭಾಗಗಳಲ್ಲಿ ಮರಳು ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಕೂಲವಾಗಲು ಪ್ರತ್ಯೇಕ ಕರಾವಳಿ ಮರಳು ನೀತಿಯನ್ನು ಸರ್ಕಾರ ಪ್ರಕಟಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಯವರು ವಿಧಾನಸಭೆಯಲ್ಲಿ ಶುಕ್ರವಾರ ಪ್ರಕಟಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಯು.ಟಿ.ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಮರಳು ನೀತಿಯನ್ನು ಪ್ರಕಟಿಸಲಿದ್ದೇವೆ. ಎಂದು ತಿಳಿಸಿದರು.
ರಾಜ್ಯದ ಅನೇಕ ಕಡೆ ಮರಳಿನ ಅಲಭ್ಯತೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಸಮಸ್ಯೆ ಉಂಟಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಪ್ರತಿಯೊಬ್ಬರಿಗೂ ಗುಣಮಟ್ಟದ ಹಾಗೂ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಇಲಾಖೆಯಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಸರ್ಕಾರ ಮರಳನ್ನು ಪ್ರತಿಯೊಬ್ಬರಿಗೂ ಮಾರುಕಟ್ಟೆ ದರದಲ್ಲೇ ತಲುಪಿಸಲು ಬದ್ದವಾಗಿದೆ. ಗುಣಮಟ್ಟದ ಮರಳನ್ನು ಸುಲಭವಾಗಿ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ಜೆಡ್ ವ್ಯಾಪ್ತಿಯಲ್ಲಿನ ನದಿಪಾತ್ರಗಳಲ್ಲಿ 2020-21 ಸಾಲಿನಲ್ಲಿ ಒಟ್ಟು 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಏಳು ಸದಸ್ಯರ ಸಮಿತಿಯಿಂದ ಒಟ್ಟು 104 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸೂಚನೆಯಂತೆ ಕರಾವಳಿ ನಿಯಂತ್ರಣ ವಲಯ ನದಿಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸಿಆರ್ಜೆಡ್ ನದಿಪಾತ್ರಗಳ ವ್ಯಾಪ್ತಿಯಲ್ಲಿ 2011-12 ಹಾಗೂ ಅದಕ್ಕಿಂತ ಮೊದಲು ಒಂದು ವರ್ಷ, ಮೂರು ವರ್ಷಗಳ ಮರಳು ದಿಬ್ಬಗಳನ್ನು ತೆರವುಗೊಳಿಸಲು ಗಡಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ತಾತ್ಕಾಲಿಕ ಪರವಾನಗಿ ಹೊಂದಿರುವರನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದರು.
ಇದಕ್ಕೂ ಮುನ್ನ ಪ್ರಶ್ನೋತ್ತರ ಅವಧಿಯಲ್ಲಿ ರಾಜ್ಯದಲ್ಲಿ ಮರಳಿನ ಅಭಾವದ ಬಗ್ಗೆ ಸದಸ್ಯರಾದ ರಘುಪತಿಭಟ್, ನಾಡಗೌಡ, ಕುಮಾರ್ ಬಂಗಾರಪ್ಪ ಮತ್ತಿತರರು, ಸಚಿವರ ಗಮನ ಸೆಳೆದಾಗ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುತ್ತಿಲ್ಲ. ಪ್ರತಿ ಕೆಡಿಪಿ ಸಭೆಯಲ್ಲೂ ಇದು ಪ್ರಸ್ತಾಪವಾಗುತ್ತದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತ್ಯೇಕ ಕರಾವಳಿ ಮರಳು ನೀತಿ -ಸಚಿವ ಮುರುಗೇಶ್ ನಿರಾಣಿ

