ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ: ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣದ ಅಪರಾಧಿಗೆ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ನಗರದ 65ನೇ ಸಿಸಿಹೆಚ್ ನ್ಯಾಯಾಲಯ ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಧ ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.
2013ರ ನ. 19ರಂದು ಕಾರ್ಪೋರೇಷನ್ ಸರ್ಕಲ್ ನ ಕಾರ್ಪೋರೇಷನ್ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಮ್ಯಾನೇಜರ್ ಜ್ಯೋತಿ ಉದಯ್ ಎಂಬುವರ ಮೇಲೆ ಮಧುಕರ್ ರೆಡ್ಡಿ ಹಲ್ಲೆ ಮಾಡಿ ಹಣ ದೋಚಿ ಓಡಿ ಹೋಗಿದ್ದ.
ಈ ಪ್ರಕರಣದಲ್ಲಿ ಮಧುಕರ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದರು.

ಹಲ್ಲೆ ನಡೆಸಿ ಹಣದೊಡನೆ ಪರಾರಿಯಾಗಿದ್ದ ಆರೋಪಿ ಹಲವಾರು ವರ್ಷಗಳ ಕಾಲ ನಾಪತ್ತೆಯಾಗಿದ್ದ. ಫೆಬ್ರವರಿ 2017ರಲ್ಲಿ ಮದನಪಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲವಾಗಿದ್ದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ 65ನೇ ಸಿಸಿಹೆಚ್ ಕೋರ್ಟ್, ಸೋಮವಾರ ಆರೋಪಿ ಮಧುಕರ್ ಶೆಟ್ಟಿ ಅಪರಾಧಿ ಎಂದು ತೀರ್ಪು ನೀಡಿತ್ತು.
ಮಧುಕರ್ ಶೆಟ್ಟಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಸಾಕ್ಷ್ಯನಾಶ ಯತ್ನ ಆರೋಪದಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.