ವಿಧಾನ ಸಭಾ ಕಲಾಪ: ಬಿಎಸ್ ವೈ V/s ಸಿದ್ದು

ಬೆಂಗಳೂರು: ವಿಧಾನ ಸಭೆಯಲ್ಲಿ ಶುಕ್ರವಾರ ನಡೆದ ಕಲಾಪದಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ನನಗೆ ಮೋದಿ, ಗೃಹ ಸಚಿವರ ಬೆಂಬಲ, ಜನರ ಆಶೀರ್ವಾದ ಇರುವವರೆಗೆ ತಾವು ಅಧಿಕಾರದಲ್ಲಿ ಇರುತ್ತೇನೆ ಎಂದು ಬಿಎಸ್ ವೈ ಹೇಳಿದರು.
ಯಡಿಯೂರಪ್ಪ ರಾಜೀನಾಮೆ ನೀಡುವುದಾಗಿ ತಾವು ಹೇಳಿಲ್ಲ, ನಿಮ್ಮ ಎಂಎಲ್ ಎ, ಎಂಎಲ್ ಸಿಗಳೇ ಹೇಳಿದ್ದಾರೆ ನಾನು ಅದನ್ನು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಯುಗಾದಿ ಆದ ಮೇಲೆ ರಾಜೀನಾಮೆ ನೀಡುತ್ತಾರೆ ಎಂದು ಅವರ ಪಕ್ಷದ ಶಾಸಕರೇ ಹೇಳಿದ್ದರು. ಅದನ್ನು ನಾನು ಪ್ರಸ್ತಾಪಿಸಿದ್ದೆ ಎಂದರು ಸಿದ್ದರಾಮಯ್ಯ.
ನೀವು ರಾಜೀನಾಮೆ ನೀಡುತ್ತೀರಾ ಎಂದು ನಾನು ಹೇಳಿಲ್ಲ. ಐದು ದಿನಗಳಲ್ಲಿ ಖಾತೆ ಬದಲಾವಣೆ ಮಾಡುವುದು ಸಮರ್ಥ ಮುಖ್ಯಮಂತ್ರಿ ಮಾಡುವ ಕೆಲಸವೇ? ಎಂದು ಸಿದ್ದರಾಮ ಪ್ರಶ್ನಿಸಿದರು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನದಲ್ಲಿ ಗೆದ್ದು ನಿಮ್ಮನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡುವುದೇ ನನ್ನ ಗುರಿ ಎಂದು ಯಡಿಯೂರಪ್ಪನವರು ಹೇಳಿದರು.
ತಮ್ಮ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಹೊರಗಿದ್ದೇನೆ ಎಂದು ಹೇಳಿದ್ದಾರೆ. ಹಾದಿ ಬೀದಿಯಲ್ಲಿ ಹೋಗುವವರು ಆರ್ ಟಿಐ ಮೂಲಕ ಮಾಹಿತಿ ಪಡೆದು ದೂರು ನೀಡುವುದು ಸಾಮಾನ್ಯ. ಇಂತಹ ನೂರು ಕೇಸು ಹಾಕಲಿ, ಎದುರಿಸುತ್ತೇನೆ ಎಂದು ಬಿಎಸ್ ವೈ ಸವಾಲು ಹಾಕಿ, ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜಾಮೀನು ಪಡೆದು ಹೊರಗಿದ್ದಾರೆ ಎಂದು ಬಿಎಸ್ ವೈ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ಸಹಕಾರ ನೀಡದೆ ಕ್ಲರ್ಕ್ ರೀತಿಯಲ್ಲಿ ನಡೆಸಿಕೊಂಡರು. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಜೆಡಿಎಸ್ ನೊಂದಿಗೆ ಕೈಜೋಡಿಸಿ ಅವರಿಗೂ ಕೆಲಸ ಮಾಡಲು ಅವಕಾಶ ನೀಡದೆ ಕಿರುಕುಳ ನೀಡಿದರು ಎಂದು ಬಿಎಸ್ ವೈ ದೂರಿದರು.
ರಾಜ್ಯಪಾಲರ ಭಾಷಣದಲ್ಲಿ ಮುನ್ನೋಟ ಇಲ್ಲ, ಅದು ಸುಳ್ಳಿನ ಕಂತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಚುನಾಯಿತ ಸರ್ಕಾರ ಅಲ್ಲ ಎಂದೂ ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿಲ್ಲವೇ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.