ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ -ಸಚಿವ ಎಸ್.ಟಿ.ಎಸ್

ಉದಗಮಂಡಲಂ, ಊಟಿ: ಉದಗಮಂಡಲಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೋಜರಾಜನ್ ಅವರು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರನ್ನು ಪಡೆದಿದ್ದಾರೆ. ಅವರ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ ಏಳುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉದಗಮಂಡಲಂ ಕ್ಷೇತ್ರದ ಮೇಲುಸ್ತುವಾರಿ ಎಸ್.ಟಿ.ಸೋಮಶೇಖರ್ ಹೇಳಿದರು.
ಉದಗಮಂಡಲಂ ಬಿಜೆಪಿ ಅಭ್ಯರ್ಥಿ ಪರ ಊಟಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಮೈಸೂರಿನ ಬಿಜೆಪಿ ತಂಡ ಹಾಗೂ ಸ್ಥಳೀಯ ಬಿಜೆಪಿ ತಂಡದೊಂದಿಗೆ ಪ್ರಚಾರ ನಡೆಸಿದ ಸಚಿವರು, ಬೋಜರಾಜನ್ ಅವರನ್ನು ಖುದ್ದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಹಾಗೂ ಗೃಹಮಂತ್ರಿಗಳಾದ ಅಮಿತ್ μÁ ಅವರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆಯ ಮಹತ್ವವು ನಮಗೆ ಪ್ರಚಾರಕ್ಕೆ ಹೋದಾಗ ತಿಳಿಯುತ್ತಿದೆ ಎಂದರು.
ಕಳೆದ ಮೂರ್ನಾಲ್ಕು ದಿನಗಳಿಂದ ಉದಗಮಂಡಲಂ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ, ಪ್ರಚಾರದಲ್ಲಿ ನಿರತರಾಗಿದ್ದೇವೆ. ಎಲ್ಲ ಕಡೆ ಸಹ ನಮಗೆ ಉತ್ತಮ ಸ್ಪಂದನೆ ದೊರೆತಿದೆ. ನಮ್ಮ ಅಭ್ಯರ್ಥಿ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಎಸ್ ಟಿಎಸ್ ಹೇಳಿದರು.
ಪ್ರಚಾರ ಸಂದರ್ಭದಲ್ಲಿ ಬೋಜರಾಜನ್ ಅವರ ಪರ ನಾವು ಮತ ಯಾಚನೆ ಮಾಡುತ್ತಿದ್ದಂತೆ, ಉತ್ತಮ ಅಭ್ಯರ್ಥಿಯನ್ನು ಈ ಬಾರಿ ನಿಲ್ಲಿಸಿದ್ದೀರಿ, ಅವರಿಗೆ ಈ ಬಾರಿ ಮತ ಚಲಾಯಿಸುತ್ತೇವೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆಂದರು.
ನನಗೆ ತಮಿಳು ಬರದಿದ್ದರೂ ಸಹ ಕನ್ನಡದಲ್ಲಿಯೇ ಮಾತನಾಡಿ ನಮಗೆ ಅರ್ಥವಾಗುತ್ತದೆ ಎಂಬ ಸಹೃದಯ ಮನೋಭಾವವನ್ನು ಇಲ್ಲಿನವರು ಮೆರೆಯುತ್ತಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಏ. 6ರಂದು ಚುನಾವಣೆ ನಡೆಯಲಿದೆ. ಸಮಯ ಕಡಿಮೆ ಇದ್ದರೂ ಪಕ್ಷದ ಕಾರ್ಯಕರ್ತರ, ಮುಖಂಡರಿಗೆ ಉತ್ತಮ ಸಂಪರ್ಕ ಇರುವುದರಿಂದ ತಮ್ಮ ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಮಾಹಿತಿಯನ್ನು ತಿಳಿಸಿ ಅವರಿಗೆ ಬಿಜೆಪಿ ಹಾಗೂ ಅಭ್ಯರ್ಥಿಯ ಬಗ್ಗೆ ಮನವೊಲಿಸಿ ಎಂದು ಸಚಿವ ಸೋಮಶೇಖರ್ ಅವರು ಕರೆ ನೀಡಿದರು.
ಇನ್ನು ಬೋಜರಾಜನ್ ಅವರು ಆಯ್ಕೆಯಾದರೆ ಮಂತ್ರಿಯಾಗುವ ಸಾಧ್ಯತೆ ಇದ್ದು, ಊಟಿಯ ಅಭಿವೃದ್ಧಿಯಾಗುತ್ತದೆ. ಈಗ ಕೇಂದ್ರದಲ್ಲಿ ನಮ್ಮದೇ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರವೇ ಇರುವುದರಿಂದ ಅಭಿವೃದ್ಧಿಗೆ ವೇಗ ಪಡೆಯಲು ಸಾಧ್ಯವಾಗಿದೆ ಎಂದರು.
ಎಐಡಿಎಂಕೆ ಮತ್ತು ಬಿಜೆಪಿ ಮೈತ್ರಿಯ ಸರ್ಕಾರ ತಮಿಳುನಾಡಿನಲ್ಲಿ ರಚನೆಯಾದರೆ ಈ ಭಾಗದಲ್ಲಿ ಕೇಂದ್ರದ ಯೋಜನೆಗಳು ಹಾಗೂ ಅನುದಾನದ ಮಹಾಪೂರವೇ ಹರಿಯಲಿದೆ ಎಂದು ಸೋಮಶೇಖರ್ ಅವರು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಶ್ರೀವತ್ಸ, ಮೈಮುಲ್ ನಿರ್ದೇಶಕ ಅಶೋಕ್, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಮೈಸೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಪ್ರತಾಪ್, ನಂಜನಗೂಡು ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಗುಂಡ್ಲುಪೇಟೆ ಬಿಜೆಪಿ ಮುಖಂಡ ಸುರೇಶ್ ಅವರು ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.