ಉದಗಮಂಡಲಂ, ಊಟಿ: ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಅಲೆ ಕೆಲಸ ಮಾಡಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉದಗಮಂಡಲಂ ಬಿಜೆಪಿ ಚುನಾವಣಾ ಉಸ್ತುವಾರಿಯವರಾದ ಎಸ್. ಟಿ. ಸೋಮಶೇಖರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸತತ 9 ದಿನಗಳ ಕಾಲ ಪ್ರಚಾರ ನಡೆಸಿದ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ಬಿಜೆಪಿ ತಂಡ ಹಾಗೂ ಊಟಿಯ ಸ್ಥಳೀಯ ನಾಯಕರ ತಂಡವು ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಊಟಿಯಲ್ಲಿ ನಾನು ಹಾಗೂ ನಮ್ಮ ತಂಡದವರು ಪಕ್ಷದ ಅಭ್ಯರ್ಥಿ ಬೋಜರಾಜನ್ ಅವರ ಪರ ಪ್ರಾಮಾಣಿಕವಾಗಿ ಪ್ರಚಾರ ನಡೆಸಿದ್ದೇವೆ ಎಂದರು.
ತಮಿಳುನಾಡಿನ ಉದಗಮಂಡಲಂ (ಊಟಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೋಜರಾಜನ್ ಪರ ಪ್ರಚಾರ ನಡೆಸಿ, ಕೆಲವು ಕಾರ್ಯತಂತ್ರಗಳನ್ನು ಹೆಣೆದಿದ್ದೇವೆ ಎಂದು ಸಚಿವ ಸೋಮಶೇಖರ್ ಹೇಳಿದರು.
ನಾವು ಯಾವ ವರ್ಗವನ್ನೂ ಕಡೆಗಣಿಸಿಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಸಿಗಬೇಕು, ಸರ್ಕಾರದ ಸೌಲಭ್ಯ ಸಿಗಬೇಕು ಎಂಬುದು ಬಿಜೆಪಿಯ ಮೂಲ ತತ್ವ. ಹೀಗಾಗಿ ನಾವು ಎಲ್ಲ ವರ್ಗದವರನ್ನು ಸಹ ನಾವು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ. ಅವರ ಸಮಸ್ಯೆಗಳು, ಕುಂದುಕೊರತೆಗಳನ್ನು ಆಲಿಸಿದ್ದೇವೆ. ನಮ್ಮ ಅಭ್ಯರ್ಥಿ ಗೆದ್ದರೆ ಊಟಿಯ ಅಭಿವೃದ್ಧಿ ನಿಶ್ಚಿತವಾಗಿ ಆಗುತ್ತದೆ ಎಂದು ಸಚಿವ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಹಲವು ವರ್ಷಗಳ ಹಿಂದೆ ನಂಜನಗೂಡು-ಊಟಿ ರೈಲ್ವೆ ಸಂಪರ್ಕ ಮಾಡುವ ಬಗ್ಗೆ ಪ್ರಸ್ತಾವನೆ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ಈ ಬಗ್ಗೆ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಮತ್ತೊಮ್ಮ ಸಂಬಂಧಪಟ್ಟವರ ಜೊತೆಗೆ ಚರ್ಚೆ ಮಾಡಿ, ಬಗೆಹರಿಸಲು ಮೊದಲನೇ ಆದ್ಯತೆಯನ್ನು ಕೊಡಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದ ಕೇಂದ್ರ ಸರ್ಕಾರಕ್ಕೆ ಹಾಗೂ ರೈಲ್ವೆ ಸಚಿವರಿಗೆ ಪತ್ರ ಬರೆಯುವ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸೋಮಶೇಖರ್ ಅವರು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಶ್ರೀವತ್ಸ, ಮೈಮುಲ್ ನಿರ್ದೇಶಕ ಅಶೋಕ್, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಮೈಸೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಪ್ರತಾಪ್, ನಂಜನಗೂಡು ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಗುಂಡ್ಲುಪೇಟೆ ಬಿಜೆಪಿ ಮುಖಂಡ ಸುರೇಶ್, ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಅವರು ಸೇರಿದಂತೆ ಮತ್ತಿತರ ಮುಖಂಡರು ಪ್ರಚಾರ ತಂಡದಲ್ಲಿ ಭಾಗಿಯಾಗಿದ್ದರು.

