ಬಾಬಾ ಸಾಹೇಬರಿಗೆ ಭಾರತರತ್ನ ನೀಡದವರನ್ನು ಇತಿಹಾಸ ಕ್ಷಮಿಸುವುದಿಲ್ಲ -ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಸಾವಿನ 34 ವರ್ಷಗಳ ಬಳಿಕವೂ ಅವರನ್ನು ಸ್ಮರಿಸದವರನ್ನು ಹಾಗೂ ಅವರಿಗೆ ಭಾರತರತ್ನ ನೀಡದವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 130 ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್ 114 ನೇ ಜಯಂತಿ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಿದ್ದಾರೆಂದರೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿಕೊಂಡಿದ್ದಾರೆಂದರು.
ಅಂಬೇಡ್ಕರರ ಸಾವಿನ 34 ವರ್ಷಗಳ ಬಳಿಕವೂ ಅವರನ್ನು ಸ್ಮರಿಸುವ ಕೆಲಸ ಯಾರೂ ಮಾಡಿರಲಿಲ್ಲ. ‘ಗರೀಬಿ ಹಠಾವೋ’ ಎಂದೇ ಹೇಳಿಕೊಂಡು 70 ವರ್ಷ ರಾಜ್ಯಭಾರ ಮಾಡಿದ ಸರ್ಕಾರಗಳಿಗೆ, ಅಂಬೇಡ್ಕರರಿಗೆ ಭಾರತರತ್ನ ನೀಡಬೇಕೆಂದು ಅನ್ನಿಸಲಿಲ್ಲ. ಇತಿಹಾಸವು ಅಂಥವರನ್ನು ಕ್ಷಮಿಸುವುದಿಲ್ಲ. ಯಾರು ದೀನದಲಿತರ ಚಿಂತನೆ ಮಾಡುತ್ತಿದ್ದಾರೆ, ನಿಜವಾದ ಕಾರ್ಯಕ್ರಮ ಯಾರು ನೀಡಿದ್ದಾರೆ ಎಂಬ ಬಗ್ಗೆ ಜನರು ಚಿಂತನೆ ನಡೆಸಬೇಕು ಎಂದರು.
ಡಾ.ಅಂಬೇಡ್ಕರರ ಜನ್ಮದಿನದಂದು ಮಾಲಾರ್ಪಣೆ ಮಾಡಿದರೆ, ಅವರ ಆಶಯಗಳಿಗನುಗುಣವಾಗಿ ನಡೆದಿದ್ದೇವೆ ಎಂದರ್ಥವಲ್ಲ. ಕೇಂದ್ರದ ಮೋದಿ ಸರ್ಕಾರ, 8 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ, ಉಚಿತ ಅನಿಲ ನೀಡಿದೆ. 10 ಕೋಟಿ ದೀನ ದಲಿತರಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯಲು ಶುದ್ಧ ನೀರು ನೀಡಲಾಗಿದೆ. ಈ ರೀತಿ ಸೌಲಭ್ಯ ನೀಡುವುದೇ ನಿಜವಾದ ಸಮಾನತೆ ಎಂದರು.
ಅಂಬೇಡ್ಕರರಂತಹ ವ್ಯಕ್ತಿಯನ್ನು ಕೂಡ ಚುನಾವಣೆಯಲ್ಲಿ ಜನರು ಸೋಲಿಸಿದರು. ಈ ಇತಿಹಾಸ ನಮ್ಮ ಮುಂದೆಯೇ ಇದ್ದು, ಯಾರು ಯಾರ ಪರವಿದ್ದರು ಎಂದು ಅರ್ಥ ಮಾಡಿಕೊಳ್ಳಬೇಕು. ಸಮಾನ ಅವಕಾಶ ನೀಡುವ ಸಂವಿಧಾನ ನಮ್ಮೊಂದಿಗಿದೆ. ಅತ್ಯಂತ ಸಣ್ಣ ಸಮುದಾಯದ ಜನರು ಕೂಡ ಮುಖ್ಯಮಂತ್ರಿಗಳಾಗಿರುವುದಕ್ಕೆ ಸಂವಿಧಾನ ಕಾರಣ ಎಂದರು.
ಲಾಕ್ ಡೌನ್ ಪರ್ಯಾಯವಲ್ಲ: ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರ್ಯಾಯವಲ್ಲ. ಜನರು ಇದನ್ನು ಅರ್ಥ ಮಾಡಿಕೊಂಡು ಜನತಾ ಕಫ್ರ್ಯೂ ವಿಧಿಸಿಕೊಳ್ಳಬೇಕು ಎಂದರು.
ಸಮಾರಂಭಗಳನ್ನು ಸರಳವಾಗಿ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪ್ರಕರಣ ಸಂಖ್ಯೆ ಹೆಚ್ಚಿದರೆ ಜಿಲ್ಲಾಡಳಿತವನ್ನೇ ಹೊಣೆ ಮಾಡಲಾಗುತ್ತದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಜನರು ಪಾಲಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಇಬ್ಬರೂ ದೇಶದ ನಕ್ಷತ್ರಗಳು. ಇಬ್ಬರೂ ನಾಯಕರು ಅಸ್ಪøಶ್ಯತೆ, ಅಸಮಾನತೆ ಹೋಗಲಾಡಿಸಲು ಜೀವನ ಮೀಸಲಿಟ್ಟರು. ಜಗಜೀವನರಾಮ್, ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ ಎಂದರು.