ಜೂ. 23ರಿಂದ ಆ. 16 ವರೆಗೆ ಭಾರೀ ವಾಹನ ಸಂಚಾರಕ್ಕೆ ನಿಷೇಧ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಮುಂದಿನ ಮುಂಗಾರು ಮಳೆಗಾಲದ ದಿನಗಳಲ್ಲಿ ನದಿಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಿತದೃಷ್ಟಿಯಿಂದ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣೆ ಮತ್ತು ಇತರೆ ಸರಕು ಸಾಗಾಣಿಕೆಯನ್ನು ಕೊಡಗು ಜಿಲ್ಲೆಯಾದ್ಯಂತ ಮಳೆಗಾಲ ಮುಕ್ತಾಯವಾಗುವವರೆಗೆ ನಿಬರ್ಂಧಿಸುವ ಬಗ್ಗೆ ತೀರ್ಮಾನಿಸಲಾಗಿದೆ.
ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಇದೇ ಜೂ. 23ರಿಂದ ಆ. 16ರ ವರೆಗೆ ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಹಾಗೆಯೇ ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ವಿನಾಯಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ಮುಖಾಂತರ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೆÇೀಸ್ಟ್ ನಿರ್ಮಿಸಿ, ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲು, ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಆರಕ್ಷಕ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.