ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ ಆಗಿದ್ದಾರೆ.

ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆದ ಹೈವೋಲ್ಟೇಜ್ ಸಭೆಯಲ್ಲಿ ದಿಲ್ಲಿಯಿಂದ ಬಿಜೆಪಿ ಹೈಕಮಾಂಡ್ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ ಹಿನ್ನೆಲೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕನಿಗೆ ಅದೃಷ್ಟ ಒಲಿದು ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.
ಯಡಿಯೂರಪ್ಪ ಅವರು ಬೊಮ್ಮಾಯಿ ಅವರ ಹೆಸರನ್ನು ಮಂಡಿಸಿದರು. ಅದನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅನುಮೋದಿಸಿದರು.

ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ ಪ್ರಮಾಣ ಸೀಕಾರ ಮಾಡುವ ಸಾಧ್ಯತೆ ಇದ್ದು. ಒಂದು ವರ್ಷ ಹತ್ತು ತಿಂಗಳ ಕಾಲ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಅಂದಹಾಗೆ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು 13 ಆಗಸ್ಟ್ 1988 ರಿಂದ 21 ಏಪ್ರಿಲ್ 1989ರವರೆಗೆ ರಾಜ್ಯದ 11ನೇ ಮುಖ್ಯಮಂತ್ರಿ ಆಗಿದ್ದರು.

ಆದರೆ ಅವರ ಸರಕಾರಕ್ಕೆ ಕೆಲ ಶಾಸಕರು ಕೈಕೊಟ್ಟರು. ನಂತರ ರಾಜ್ಯಪಾಲರು ಅವರ ಸರಕಾರವನ್ನು ವಜಾ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ( ಸೋಮಪ್ಪ, ರಾಯಪ್ಪ) ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಎಸ್ ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು.

ಇದೇ ಮೊದಲ ಬಾರಿಗೆ ತಂದೆ ಹಾಗೂ ಮಗ ಸಿಎಂ ಸ್ಥಾನಕ್ಕೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಇದಕ್ಕೂ ಮುನ್ನ ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

1998ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜನತಾದಳ ಸಂಯುಕ್ತ ತೊರೆದು 2008 ರಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬೊಮ್ಮಾಯಿ, ಮೂರು ಬಾರಿ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಮಗನಾದ ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿ ಬಿಜೆಪಿಗೆ ಬಂದವರು.