ಹುಬ್ಬಳ್ಳಿ: ರಾಜ್ಯದ ಅತಿ ದೊಡ್ಡ ನಗರವಾಗಿರುವ ಹುಬ್ಬಳ್ಳಿ ಮತ್ತು ಧಾರವಾಡದ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಖ್ಯಮಂತ್ರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸುವೆ. ಇಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಸೇರಿದಂತೆ ಶಾಸಕ ಮಿತ್ರರಿದ್ದಾರೆ. ಪಕ್ಷ ಮತ್ತು ಸಂಘ ಪರಿವಾರದ ಹಿರಿಯರಿದ್ದಾರೆ. ಅವರೆಲ್ಲರೊಂದಿಗೆ ಚರ್ಚಿಸಿ, ಅವಳಿನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಶುಕ್ರವಾರ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ನಂತರ ಎರಡ್ಮೂರು ದಿನಗಳ ಬಳಿಕ, ಮತ್ತೊಮ್ಮೆ ಹೋಗಿ ಸಂಪುಟದ ಬಗ್ಗೆ ಚರ್ಚಿಸಿ, ಸಚಿವರ ಆಯ್ಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ ಅವರು, ಹಿರಿಯರಾದ ಜಗದೀಶ್ ಶೆಟ್ಟರ್ ಅವರು ನನ್ನ ಸಂಪುಟಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ನಾವಿಬ್ಬರೂ ಸ್ನೇಹಿತರು. ಒಟ್ಟಿಗೆ ಬೆಳೆದವರು. ಬೇರೆ ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನಮ್ಮ ನಡುವೆ ಒಳ್ಳೆಯ ಸಂಬಂಧಗಳಿವೆ. ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಿ, ಅವರ ಭಾವನೆಗಳನ್ನು ತಿಳಿದುಕೊಳ್ಳುವೆ. ಹಿರಿಯರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವೆ ಎಂದು ತಿಳಿಸಿದರು.

