ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು ಡಿಕ್ಕಿ

ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಗಾವಲು ವಾಹನ ಮತ್ತು ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮುಂಭಾಗ ಗುರುವಾರ ಈ ಘಟನೆ ನಡೆದಿದೆ.

ಈ ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಮಳೆ ಬಾಧಿತ ಪ್ರದೇಶದ ಸಮೀಕ್ಷೆಗೆ ತೆರಳುವ ಹಿನ್ನೆಲೆಯಲ್ಲಿ ಬೆಂಗಳೂರಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸಿಎಂ ಹೊರ ಹೋಗುತ್ತಿದ್ದ ವೇಳೆ ಸಿಎಂ ಕಾರನ್ನು ಹಿಂಬಾಲಿಸುವ ಭರದಲ್ಲಿ ಶಿವರಾಮ್ ಹೆಬ್ಬಾರ್ ಅವರು ಪ್ರಯಾಣಿಸುತ್ತಿದ್ದ ಕಾರು, ಸಿಎಂ ಬೆಂಗಾವಲು ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.