ಮೈಸೂರು: ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರದೊಂದಿಗೆ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಸೋಮವಾರ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ನಗರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಅಟಲ್ ಬಿಹಾರಿ ವಾಜಪೇಯಿರವರು ಮೂರು ಬಾರಿ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿ ಅಭೂತಪೂರ್ವವಾಗಿ ಸೇವೆ ಸಲ್ಲಿಸಿದ್ದಾರೆಂದರು.
ಭಾರತೀಯರ ಪ್ರತಿಯೊಬ್ಬರ ಕನಸಾಗಿದ್ದ ಅಯೋಧ್ಯೆ ರಾಮಜನ್ಮ ಭೂಮಿ ನಿರ್ಮಾಣ ಹೋರಾಟ ಸಾಕಾರಗೊಳ್ಳಲು ವಿಜಯಸಂಕಲ್ಪ ಯಾತ್ರೆ ಮೂಲಕ ಯಶಸ್ವಿಯಾಗಲೂ ಯೋಜನೆ ರೂಪಿಸಿದವರೇ ಅಟಲ್ ಜೀ ರವರು ಎಂದು ಹೇಳಿದರು.
ಇದಲ್ಲದೇ ರಾಜ್ಯಸಭೆ,ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿ, ಉತ್ತಮ ಕವಿ, ಬರಹಗಾರರಾಗಿಯೂ ಹೆಸರು ಗಳಿಸಿದ್ದರು ಎಂದರು.
ರಾಷ್ಟ್ರಧರ್ಮ,ಪಾಂಚಜನ್ಯ,ಸ್ವದೇಶಿನೀತಿ ಅನುಸರಿಸುವಿಕೆ ಮತ್ತು ವೀರ ಅರ್ಜುನ್ ಅಂತಹ ಅನೇಕ ಪತ್ರಿಕೆಗಳ ಸಂಪಾದಕರಾಗಿಯೂ ಅಟಲ್ ಜೀ ರವರು ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಭಾರತದ ಕನ್ಯಾಕುಮಾರಿಯಿಂದ ದಿಲ್ಲಿಗೆ ಚಲಿಸುವ ರೈಲಿಗೆ ‘ವಾಜಪೇಯಿ ಎಕ್ಸ್ ಪ್ರೆಸ್’ ಎಂದು ನಾಮಕರಣ ಮಾಡಿ ಅಟಲ್ ಜೀ ರವರಿಗೆ ಗೌರವ ಸಮರ್ಪಿಸಬೇಕೆಂದು ಜೋಗಿ ಮಂಜು ಆಗ್ರಹಿಸಿದರು.
ಈ ಸಂದರ್ಭದಲ್ಲಿಪ್ರಜ್ಞಾವಂತ ನಾಗರಿಕ ವೇದಿಕೆಯ ಸುಚೀಂದ್ರ ,ಚಕ್ರಪಾಣಿ, ನವೀನ್, ಮುಕೇಶ್, ಮಹದೇವ್, ಹಿರಿಯ ನಾಗರಿಕರಾದ ಬೈಲಪ್ಪ, ಮಹದೇವಸ್ವಾಮಿ, ತ್ಯಾಗರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

