ಮೈಸೂರು: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಮೈಸೂರಲ್ಲಿ ನಿರಸ ಪ್ರತಿಕ್ರಿಯೆ ಕಂಡು ಬಂದಿದೆ.
ಬಂದ್ ಕೇವಲ ವಿವಿಧ ಸಂಘಟನೆಗಳ ಪ್ರತಿಭಟನೆಗಷ್ಟೇ ಸೀಮಿತವಾದಂತಿದೆ.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ, ವಿವಿಧ ರೈತ ಪರ ಸಂಘಟನೆಗಳು ಕೇಂದ್ರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಲವು ಸಂಘಟನೆಗಳು ಭಾರತ್ ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದವು. ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿತ್ತು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಮೈಸೂರಿನ ಸಬರ್ಬನ್ ಬಸ್ ನಿಲ್ದಾಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಕೆಲವು ಸಂಘಟನೆಗಳು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಗಿತ್ತು.
ಬಸ್ ಸಂಚಾರಕ್ಕೆ ತೊಂದರೆಯಾಗದಂತೆ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು ಅರಮನೆಯ ಮುಂಭಾಗದಲ್ಲಿ ಕೂಡ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ನಗರ ಪ್ರಮುಖ ಬೀದಿಗಳಲ್ಲಿ, ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆಯಲ್ಲಿಯೇ ಕುಳಿತು, ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂತು, ಬಸ್ ಗಳು, ಆಟೋಗಳು, ಕಾರ್ ಗಳು ಎಂದಿನಂತೆ ಸಂಚರಿಸುತ್ತಿವೆ.
ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು ಮಾತ್ರ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದರು.
ಹೋರಾಟಕ್ಕಿಳಿದವರು ನಮ್ಮ ಬಂದ್ ಗೆ ಬೆಂಬಲ ನೀಡಿ ಎಂದು ಅಂಗಡಿಗಳ ಮಾಲೀಕರಲ್ಲಿ ಮನವಿ ಮಾಡಿದರಾದರೂ, ಕೊರೊನಾ ಸಂಕಷ್ಟದಿಂದ ಈಗಾಗಲೇ ನಲುಗಿದ ಮಳಿಗೆಗಳ ಮಾಲೀಕರು ಅಂಗಡಿ ಬಂದ್ ಮಾಡಲು ನಿರಾಕರಿಸಿ ವಾಪಾರ ನಡೆಸುತ್ತಿದ್ದಾರೆ.
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಕೂಡ ಇಂದಿನಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮೈಸೂರು ನಗರದ ಪೀಪಲ್ಸ್ ಪಾರ್ಕ್, ವಿಜಯ ವಿಠಲ, ನಿರ್ಮಲಾ ಕಾನ್ವೆಂಟ್ ಸೇರಿದಂತೆ ಐದು ಕಡೆ ಹಾಗೂ ಹುಣಸೂರು, ತಿ.ನರಸೀಪುರದ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆದಿದೆ.
ಮಂಜಾಗೃತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.

