ಮೈಸೂರಲ್ಲಿ ಸುರಿದ ಧಾರಾಕಾರ ಮಳೆಗೆ ಚಾಮುಂಡಿಬೆಟ್ಟದಲ್ಲಿ ಭೂಕುಸಿತ

ಮೈಸೂರು: ಮೈಸೂರಿನಾದ್ಯಂತ ಬುಧವಾರ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮೈಸೂರಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಸಿಡಿಲು-ಗುಡಿಗಿನೊಂದಿಗೆ ಆರಂಭವಾದ ಮಳೆ ತಡರಾತ್ರಿಯವರೆಗೂ ಬಿಟ್ಟು ಬಿಟ್ಟು ಧಾರಾಕಾರವಾಗಿ ಸುರಿಯುತ್ತಲೇ ಇತ್ತು.

ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಜಯಪುರ ಸಮೀಪ ಕೆಎಸ್ ಆರ್ ಟಿಸಿ ಬಸ್ ಒಂದು ಸುರಿಯುತ್ತರಿದ್ದ ಮಳೆ ನಡುವೆಂ ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿ ಸ್ಥಳೀಯರು ಆಘಮಿಸುತ್ತಿದ್ದಂತೆ ಬಸ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದು, ಬಸ್ ರಸ್ತೆಯಲ್ಲಿಯೇ ನಿಂತ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಭಾರೀ ಮಳೆಗೆ ಚಾಮುಂಡಿಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ದಸರಾ ಪ್ರಯುಕ್ತ ಬೆಟ್ಟದಲ್ಲಿ ಅಳವಡಿಸಿರುವ ಸುಸ್ವಾಗತ ವಿದ್ಯುತ್ ದೀಪಗಳ ಫಲಕದ ಬಳಿ ಭೂ ಕುಸಿತವಾಗಿದೆ. ರಸ್ತೆ ಬದಿಯ ತಡೆಗೋಡೆ ಸೇರಿದಂತೆ ರಸ್ತೆಯ ಕೆಲಭಾಗ ಕುಸಿದಿದ್ದು ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಈ ಪ್ರದೇಶದಲ್ಲಿ ಯಾರೂ ಸಹ ಸಂಚರಿಸಬಾರದೆಂದು ಸೂಚಿಸಲಾಗಿದೆ.

ನಗರದ ಹೆಬ್ಬಾಳದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು.

ಮೈಸೂರಿನ ವಿಜಯ ಬ್ಯಾಂಕ್ ಸರ್ಕಲ್ ನ ವಿಶ್ವ ಮಾನವ ಜೋಡಿ ರಸ್ತೆ ಬಳಿ ಇರುವ ಪೆಟ್ರೋಲ್ ಬಂಕ್ ನ ಕಟ್ಟಡ ಕುಸಿತಗೊಂಡಿದ್ದು, ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರಕಾರವಾಗಿ ಸುರಿದ ಮಳೆಯಿಂದ ಜನತಾನಗರದ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ, ಗಂಗೋತ್ರಿ ಬಡಾವಣೆಯ ಕೆಲವು ಮನೆಗಳು, ದಟ್ಟಗಳ್ಳಿ, ಪಡುವಾರಹಳ್ಳಿಯ ಕೆಲವು ಮನೆಗಳಿಗೂ ನೀರು ನುಗ್ಗಿ, ನಿವಾಸಿಗಳು ತೊಂದರೆ ಅನುಭವಿಸಿದರು.

ದೇವರಾಜ ಅರಸು ರಸ್ತೆ, ಸಯ್ಯಾಜಿರಾಬ್ ರಸ್ತೆ, ಬನ್ನಿಮಂಟಪ ರಸ್ತೆ, ಕುವೆಂಪುನಗರ, ರಾಮಕೃಷ್ಣನಗರ, ಸಿದ್ದಾರ್ಥ ನಗರದ ಆಲನಹಳ್ಳಿ ಬಡಾವಣೆ, ಎಸ್ ಆರ್ ಮೊಹಲ್ಲಾ, ಉದಯಗಿರಿ, ಮಹದೇವಪುರ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್ ಬಿ ರಸ್ತೆ, ನ್ಯೂಕಾಂತರಾಜ ಅರಸ್ ರಸ್ತೆ, ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು, ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಭಾರಿ ಮಳೆ ಹಿನ್ನೆಲಯಲ್ಲಿ ದಸರಾ ದೀಪಾಲಂಕಾರವನ್ನು ಕೆಲವು ಕಡೆ ಸ್ಥಗಿತಗೊಳಿಸಲಾಗಿತ್ತು.

ಪಾಲಿಕೆಯ ಅಭಯ್ ರಕ್ಷಣಾ ತಂಡವು ಮನೆಗಳಿಗೆ ನೀರು ನುಗ್ಗಿದ್ದ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.