ಮೈಸೂರು: ಮೈಸೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಚಾಮುಂಡಿಬೆಟ್ಟದ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತವಾಗಿದ್ದು, ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದ್ದಾರೆ.

ಬುಧವಾರ ಸಂಜೆ ಆರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿದ ಪರಿಣಾಮ ಚಾಮುಂಡಿಬೆಟ್ಡದಲ್ಲಿ ಬೃಹತ್ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಹಾನಿಗೀಡಾಗಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಾಗಬಹುದಾದ ಅನಾಹುತ ತಪ್ಪಿಸಲು ಕೂಡಲೇ ಆ ರಸ್ತೆ ಸಂಚಾರವನ್ನು ಬಂದ್ ಮಾಡಿ, ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ತಿಳಿಸಿದ್ದಾರೆ.
ಆದಷ್ಟು ಶೀಘ್ರದಲ್ಲಿ ಬಂದು ಪರಿಶೀಲಿಸಲಿದ್ದು, ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ತೆಗೆದುಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

