ಕನ್ನಡ ಬಳಕೆಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ -ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಕನ್ನಡ ಬಳಕೆಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಟಿ. ಸೋಮಶೇಖರ್‌ ಹೇಳಿದರು.

ಮೈಸೂರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಏರ್ಪಡಿಸಲಾಗಿದ್ದ  ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಚಿವರು ಧ್ವಜಾರೋಹಣ ನೆರವೇರಿಸಿದರು ಬಳಿಕ ಮಾತನಾಡಿದರು.

ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ನಮ್ಮ ಸರ್ಕಾರ ಇಂದು ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ನಾವೆಲ್ಲರೂ ಮುಂದಾಗಬೇಕಾಗಿದೆ ಎಂದರು.

ಕನ್ನಡ ಭಾಷೆಯ ಶ್ರೀಮಂತಗೊಳಿಸುವಿಕೆಯೊಂದಿಗೆ ಸಾಹಿತ್ಯ ಹಾಗೂ ಸಂಸ್ಕೃತಿಗಳ ಉತ್ತೇಜನಕ್ಕೂ ನಮ್ಮ ಸರಕಾರವು ಸಾಕಷ್ಟು ಒತ್ತು ನೀಡಿದೆ ಎಂದರು.

ತಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಚರವಾಣಿ (ಮೊಬೈಲ್‍ನಲ್ಲಿ) ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದೆ ಎಂದು ಸಚಿವ ಸೋಮಶೇಕರ್‌ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ. ವಿಜ್ಞಾನ-ತಂತ್ರಜ್ಞಾನದ ಜೊತೆ ಜೊತೆಗೂ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ ಎಂದರು.

ಚರವಾಣಿ (ಮೊಬೈಲ್) ಮೂಲಕ ಆಟೋ ಟ್ಯಾಕ್ಸಿ ಬಾಡಿಗೆ ಸೇವೆ ನೀಡುವ ಓಲೋ, ನಾವು ಇರುವಲ್ಲಿಗೇ ಊಟ ತಂದುಕೊಡುವ ಜೊಮ್ಯಾಟೋನಲ್ಲಿಯೂ ಸಹ ಕನ್ನಡ ಬಳಸಲು ಅವಕಾಶವಿದೆ. ಇಲ್ಲಿ ಕನ್ನಡದಲ್ಲೇ ವ್ಯವಹರಿಸುವ ಮೂಲಕ ನಮ್ಮ ನೆಲೆದ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

ಕನ್ನಡವನ್ನು ಯುವಕರು ಒಲವಿನ ಭಾಷೆಯಾಗಿ ಬಳಸಬೇಕಾಗಿದೆ. ಕನ್ನಡದ ಅಸ್ಮಿತೆಯನ್ನು ಕಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಕನ್ನಡ ನಮ್ಮ ಬದುಕಿನ ಭಾಷೆ, ನಮ್ಮ ಹೃದಯದ ಭಾಷೆ ಎಂಬುದನ್ನು ಯಾರೂ ಮರೆಯಬಾರದು ಸಚಿವ ಒತ್ತಿ ಹೇಳಿದರು.

ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡದ ಮನಸ್ಸುಗಳು ಏಕೀಕರಣವಾಗಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದವರು ತಿಳಿಸಿದರು.

ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದವರು ಸಾಹಿತಿಗಳು ಹಾಗೂ ರಾಜಕಾರಣಿಗಳು. ರಾಷ್ಟ್ರಕವಿ ಕುವೆಂಪು ಅವರು ಸಹ ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಸಾಹಿತಿಗಳು, ಚಿಂತಕರು, ಲೇಖಕರು ತಮ್ಮ ಬರಹಗಳ ಮೂಲಕ ಏಕೀಕರಣದ ಪರವಾಗಿ ಧ್ವನಿಗೂಡಿಸಿದರು. ಮೈಸೂರಿನಿಂದ ಪ್ರಕಟವಾಗಿದ್ದ ಸಾಧ್ವಿ ಪತ್ರಿಕೆಯ ಸಂಪಾದಕರಾದ ಅಗರಂ ರಂಗಯ್ಯ ಅವರು ಏಕೀಕರಣ ಕುರಿತ ಲೇಖನಗಳನ್ನು ಹೆಚ್ಚು ಹೆಚ್ಚಾಗಿ ಪ್ರಕಟಿಸುತ್ತಿದ್ದರು. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಅರುಣಾ ಪತ್ರಿಕೆಯ ಸಂಪಾದಕರಾದ ಕುಮಾರಸ್ವಾಮಿ ಅವರು, ಇನ್ನೂ ಅನೇಕರು ಏಕೀಕರಣಕ್ಕೆ ಬೆಂಬಲವಾಗಿ ನಿಂತರು. ಹೀಗೆ, ಕನ್ನಡ ನಾಡಿನ ಸ್ಥಾಪನೆಗೆ ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಇಂದು ಗೌರವಪೂರ್ವಕವಾಗಿ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕನ್ನಡವು ಯಾವುದೋ ಮತ ಪಂಥದ ಭಾಷೆಯಲ್ಲ. ಅದು ಈ ನಾಡಿನ, ಈ ಮಣ್ಣಿನ ಭಾಷೆ. ಈ ಭಾಷೆಯಲ್ಲೇ ನಮ್ಮ ಸಂಸ್ಕೃತಿ ಇದೆ. ನಮ್ಮ ಸಂಸ್ಕಾರ ಇದೆ. ನಮ್ಮ ಸಂಬಂಧಗಳು ಇವೆ. ನಮ್ಮ ನಾಗರೀಕತೆ ಇದೆ. ಈ ಭಾಷೆಯ ಶ್ರೀಮಂತಿಕೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮುಂದಿನ ತಲೆಮಾರಿಗೆ ಈ ಭಾಷೆಯನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.

ಅವರು 66ನೇ ಕರ್ನಾಟಕ ರಾಜ್ಯೋತ್ಸವದಂದು ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.

ಸಮಾರಂಭದಲ್ಲಿ ಶಾಸಕರುಗಳಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.